Index   ವಚನ - 126    Search  
 
ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ ಅಪಕ್ಷೀಯತೇ ವಿನಶ್ಯತಿ ಎಂಬ ಷಡ್ಭಾವ ವಿಕಾರಂಗಳು ಕೆಡುವುದಕ್ಕೆ ವಿವರವೆಂತೆಂದಡೆ; ಶ್ರೀಗುರುವಿನ ಕೃಪಾಗರ್ಭದ ಮಧ್ಯದಲ್ಲಿರ್ದವ ನಾನಹುದೆಂದರಿದಾಗವೆ ಅಸ್ತಿ ಎಂಬ ವಿಕಾರ ಕೆಟ್ಟಿತ್ತು. ಗುರು ಕರದಲ್ಲಿ ಜನಿಸಿದೆನಾಗಿ ನಾ ಮಾಯಾಯೋನಿಜನವಲ್ಲವೆಂದು ಅರಿದಾಗವೆ ಜಾಯತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಸದ್ಭಾವಜಾತ ಲಿಂಗವನಂಗದಲ್ಲಿ ಧರಿಸಿ ಪರಮ ಪರಿಣಾಮದಲ್ಲಿ ಪರಿಣಮಿಸುತ್ತಿರ್ದ ಕಾರಣ ವಿಪರಿಣಮತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಆಚಾರ ಜ್ಞಾನಮಾರ್ಗದಲ್ಲಿ ಆಚರಿಸಿ ಬೆಳೆವುತ್ತಿದ್ದ ಕಾರಣ ವಿವರ್ಧತೇ ಎಂಬ ವಿಕಾರ ಕೆಟ್ಟಿತ್ತು. ದೇಹೇಂದ್ರಿಯಾದಿಗಳೆಲ್ಲ ಲಿಂಗದಲ್ಲಿ ಅಡಗಿ ಶಿಥಿಲವಾಗಲು ಅಪಕ್ಷೀಯತೇ ಎಂಬ ವಿಕಾರ ಕೆಟ್ಟಿತ್ತು. ಲಿಂಗಾಂಗದ ಐಕ್ಯವನರಿದು ಲಿಂಗದಲ್ಲಿ ಲೀಯವಾಗಲು ವಿನಶ್ಯತಿ ಎಂಬ ವಿಕಾರ ಕೆಟ್ಟಿತ್ತು. ಇಂತೀ ಲಿಂಗಸಂಗದಿಂದ ಷಡ್ಭಾವ ವಿಕಾರಂಗಳಳಿದು ನಿಮ್ಮವಿಕಾರವೆಡೆಗೊಂಡಿತ್ತು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಭಕ್ತಂಗೆ.