ಜಪ ತಪ ನಿತ್ಯ ನೇಮ ವ್ರತ ಶೀಲಂಗಳೆಂಬ
ಸರ್ವೋಪಾಯಂಗಳಿಂದ
ಶಿವನ ಸಾಧಿಸಿ ಭೇದಿಸಿ ಕಂಡೆಹೆವೆಂಬ
ಉಪಾಯಸಾಧಕರು ನೀವು ಕೇಳಿ.
ಆ ಉಪಾಯಂಗಳನೂ ಶಿವಪ್ರಸನ್ನಿಕೆಯಿಂದ ಪಡೆದು
ಶುದ್ಧ ಸಂಸಾರಿಗಳಾದ ಜ್ಞಾನಿಗಳು ಸ್ವಯಂಪ್ರಕಾಶವಾಗಿಯು
ವಿಶ್ವಪ್ರಕಾಶನಾದ `ಸತ್ಯಜ್ಞಾನಮನಂತಂ ಬ್ರಹ್ಮ'ವೆಂಬ
ಲಕ್ಷಣವುಳ್ಳ ಪರಿಪೂರ್ಣ ಪರಶಿವನ
ಜ್ಞೇಯಸ್ವರೂಪದಿಂದರಿದವರು
ಜೀವನ್ಮುಕ್ತರಾಗಿ ವರ್ತಿಸುತ್ತಿಹರು ಕಾಣಾ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.