Index   ವಚನ - 223    Search  
 
ಪದಾರ್ಥದ ಪೂರ್ವವ ಕಳೆದಲ್ಲದೆ ಹಿಡಿಯಬಾರದು. ಮುಟ್ಟಿ ಕೊಡಬಾರದು. ಮುಟ್ಟದೆ ಕೊಡಬಾರದು. ಅಂದೆಂತೆಂದೆಡೆ: ತನ್ನ ಹಸ್ತದೊಳಗೆ ಲಿಂಗದ ಹಸ್ತವ ಕೂಡಿ ಮುಟ್ಟದೆ ಮುಟ್ಟಿಸುವ ಕ್ರಮವನರಿದು ಕೊಡಬೇಕು. ರುಚಿಗಳ ತಾನರಿದು ಕೊಡಬಾರದು. ತಾನರಿಯದೆ ಕೊಡಬಾರದು. ಅದೆಂತೆಂದಡೆ: ತನ್ನ ಜಿಹ್ವೆಯಲ್ಲಿ ಲಿಂಗದ ಜಿಹ್ವೆಯ ಕೂಡಿ ರುಚಿಗಳನರ್ಪಿಸುವ ಕ್ರಮವನರಿದು ಕೊಡಬೇಕು. ಅನರ್ಪಿತವ ಸೋಂಕಬಾರದು. ಅರ್ಪಿತಕ್ಕೆ ಬಂದುದ ನೂಕಬಾರದು. ಇಂತಿವರ ವಿಚಾರವನರಿದು ಅರ್ಪಿಸಿ ಪ್ರಸಾದವ ಭೋಗಿಸುವಾತನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸರ್ವ ಸುಯಿಧಾನಿ.