Index   ವಚನ - 358    Search  
 
ಆದಿ ಅನಾದಿಯೆಂಬವಕ್ಕೆ ತಾನಾದಿಯಾದ ಕಾರಣ, ಆದಿಪ್ರಸಾದವೆನಿಸಿತ್ತು. ಆ ಪ್ರಸಾದವು ಭೇದಿಸಬಲ್ಲ ಪ್ರಸಾದಿಗಲ್ಲದೆ ಸಾಧ್ಯವಾಗದು. ಸರ್ವಾಧಿಷ್ಠಾತೃ ಶಂಭುಪ್ರಸಾದದಿಂದಲ್ಲದೆ ಸಂಸಾರ ಕೆಡದು, ಮೋಹಗ್ರಂಥಿ ಬಿಡದು. ಅದೆಂತೆಂದಡೆ: ಸೂರ್ಯೋದಯವಾಗೆ ತಮ ಹರಿವಂತೆ, ಪ್ರಸಾದದಿಂದ ಅನೇಕ ಜನ್ಮಶುದ್ಧ. ನಿರಂಹಂಕಾರ ಭಾವಸಿದ್ಧಿಯೆಂದರಿದು, ಪುರಾತನರು ಪ್ರಸಾದವ ಪಡೆದು ಮುಕ್ತರಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.