ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ
ಅರಿದಿಹೆನೆಂಬ ಉಪಮೆಯಳಿದು,
ಸ್ವಾನುಭವಸಿದ್ಧಿಯಿಂದ ತನ್ನ ಸ್ವರೂಪವ ತಾನರಿದು
ಅರಿದೆನೆಂಬ ಅರಿವಿನ ಮರವೆಯ ಕಳೆದು,
ವರ್ಣಾಶ್ರಮಂಗಳಾಚಾರಂಗಳ ಮೀರಿದ ಶಿವಯೋಗಿಯೇ
ವೇದವಿತ್ತಮನು, ವೇದವಿತ್ತಮನು.
ಆತನೆಲ್ಲರ ಅಜ್ಞಾತವ ತೊಳೆದು ನಿಜಮುಕ್ತರ ಮಾಡುವ
ಕರುಣಾಕರನು.
ಆ ಮಹಾತ್ಮನೇ ಸರ್ವಪ್ರಪಂಚಿನ
ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕಾರಣನಾದಾತನು.
ಆ ಯೋಗಿ ಶರಣನೇ ಸಚ್ಚಿದಾನಂದ
ಪರಮ ಸಾಯುಜ್ಯರೂಪನು.
ಆ ಮಹಾಪುರುಷನೇ ಸಾಲೋಕ್ಯಾದಿ ಸಮಸ್ತ ಮುಕ್ತಿಯ
ಕೊಡುವಾತನೂ ಆಗಿ,ಪರಿಪೂರ್ಣ ಭಾವದಿಂದ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಾಗಿ ತೋರುತ್ತಿಹನು.