Index   ವಚನ - 126    Search  
 
ಮರಲ್ದುಮಾ ಪ್ರಣವಂ ಪಂಚಪ್ರಕಾರಮಾದಪುದೆಂತೆನೆ ಸಾಕಲ್ಯಪ್ರಣವವೆಂದು, ಶಾಂಭವಪ್ರಣವವೆಂದು, ಸೌಖ್ಯಪ್ರಣವವೆಂದು, ಸಾವಶ್ಯಪ್ರಣವವೆಂದು, ಸಾಯುಜ್ಯಪ್ರಣವವೆಂದು ಸದಾಶಿವನ ಪಂಚಮುಖಂಗಳಲ್ಲಿ ಪೊರೆಪೊಣ್ಮಿದವಿವರೊಳ್ಮೊದಲು ಸಾಕಲ್ಯಪ್ರಣವಕ್ಕೆ ವಿವರಂ- ಅಕಾರಂ ಉಕಾರಂ ಮಕಾರಂ ಎಂದು ತ್ರಿವಿಧಂ. ಈ ತ್ರಿಮಾತ್ರಾಂತರ್ಗತವಾಗಿರ್ಪುದು ಶುದ್ಧ ಶಿವಶಬ್ದ ವಾಚ್ಯವಾದದಾಖ್ಯವೆನಿಪ ಹಕಾರಂ. ಅಕಾರಂ ಉಕಾರಂ ಈ ಎರಡುಂ ಕೂಡಿದುದೆ ಒಕಾರಂ. ಈ ಮಂತ್ರಮೂರ್ತಿಗೆ ಅಕಾರವೆ ಬಲಂ ಉಕಾರವೆ ಎಡಂ ಮಕಾರವೆ ಮಧ್ಯದೇಹಂ. ಈ ಮೂರು ಕೂಡಿ ಓಂ ಎಂದು ಮೂರ್ತಿಯಾಯಿತ್ತೀ. ತ್ರಿವಿಧಾತ್ಮಕ ಶರೀರಕ್ಕೆ ಹಕಾರವೆ ಶುದ್ಧ ಚೈತನ್ಯಬ್ರಹ್ಮವೆನಿಸಿತ್ತು. ಅಕಾರಕ್ಕೆ ಬ್ರಹ್ಮನಧಿದೇವತೆ. ಉಕಾರಕ್ಕೆ ವಿಷ್ಣುವಧಿದೇವತೆ. ಮಕಾರಕ್ಕೆ ರುದ್ರನಧಿದೇವತೆ. ಒಕಾರಕ್ಕ ಸದಾಶಿವನಧಿದೇವತೆ. ನಾದಾತ್ಮಕಮಾದ ಹಕಾರವೆ ಪರಶಿವಸ್ವರೂಪಂ. ಈ ತೆರನಾದ ಆ ಉ ಮ ಒ ಹ ಎಂಬೀ ಪಂಚಾಕ್ಷರಂಗಳ್ಪಂಚ ದೇವತಾಸ್ವರೂಪಂಗಳೀ ಸಕಲಂಗೂಡಿ ಓಂ ಎಂಬುದೆ ಸಾಕಲ್ಯಪ್ರಣವಂ. ಇದೊಂದೆ ಬ್ರಹ್ಮಂ. ಮತ್ತಂ, ಪಂಚಮ ಸಂಜ್ಞಿಕವಾದ ಉಕಾರಂ ಪ್ರಥಮಸಂಜ್ಞಿಕವಾದ ಅಕಾರಮಂ ಕೂಡೆ ಒ ಎಂದಾಯಿತ್ತದೆ ತೃತೀಯಸಂಜ್ಞಿಕಮಕಾರಾಂತರ್ಗತವನುಳ್ಳ ಹಕಾರವೆನಿಸಿತ್ತಿಂತು ಅ ಉ ಮ ಒ ಎಂಬ ಚತುರಕ್ಷರಂಗೂಡಿದ ಹ ಎಂಬ ಶಿವಬೀಜವೆ ಸಾಕಲ್ಯಪ್ರಣವವೆನಿಸಿತ್ತೀ ಸಾಕಲ್ಯಪ್ರಣವವೆ ಸದಾಶಿವನ ಪೂರ್ವಮುಖದಲ್ಲಿ ಉದ್ಧೃತವಾಯಿತ್ತೀ ಪ್ರಣವಬ್ರಹ್ಮಕ್ಕೆ ಮತ್ತೊಂದು ಸಾಕಲ್ಯಾಭಿಧಾನಮನುಂಟು ಮಾಳ್ಪುದೆಂತೆನೆ ಶಿವತತ್ವಬೀಜಕ್ಕೆ ಸದಾಶಿವತತ್ವ ಭೇದವಾದ ಮತ್ತೊಂದು ಶುದ್ಧಾಭಿಧಾನವಾದುದೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.