Index   ವಚನ - 127    Search  
 
ಮತ್ತಂ, ಸಾಕಲ್ಯಪ್ರಣವ ನಿರೂಪಣಾನಂತರದಲ್ಲಿ ಪಂಚಮಾತ್ರಾಸಮನ್ವಿತಮಾದ ಶಾಂಭವಪ್ರಣವವಂ ಪೇಳ್ದೆನೀ ಪಂಚಪ್ರಣವಂಗಳ್ಗೆಯುಂ ಹ ಎಂಬಕ್ಕರಂ ಪ್ರಸಿದ್ಧಂ. ತದನಂತರದೊಳ್ಸೌಖ್ಯಪ್ರಣವ ಭೇದಮಂ ಪೇಳ್ವೆನೆಂತೆನೆ ವರ್ಗಾದಿ ಸಂಜ್ಞಿತವಾದ ಅಕಾರಂ ಪಂಚಮಸ್ವರ ಸಂಜ್ಞಿತವಾದ ಉಕಾರಂ ಷಷ್ವವರ್ಗಾಂತ ಸಂಜ್ಞಿತವಾದ ಮಕಾರಂ ಬೀಜ ಸಂಜ್ಞಿತವಾದ ಹಕಾರಂ ತೃತೀಯ ಸ್ವರ ಸಂಜ್ಞಿತವಾದ ಇಕಾರಂ ಇಂತು ಅ ಉ ಮ ಹ ಇ ಈ ಐದಕ್ಕರಂಗೂಡಿದ ಸೌಖ್ಯಪ್ರಣವಂ ಸದಾಶಿವನ ಪಶ್ಚಿಮವದನದೊಳುಣ್ಮಿದುದು. ಮತ್ತಂ, ಸಾವಶ್ಯಪ್ರಣವವೆಂತೆನೆ- ಅಕಾರಂ ಸ್ವರಪಂಚಮಾಂತ ಸಂಜ್ಞಿತವಾದ ಉಕಾರಂ. ಪವರ್ಗಾಂತರವಾದ ಮಕಾರಂ ತತ್ವ ಬೀಜ ಸಂಜ್ಞಿತವಾದ ಹಕಾರಂ, ಏಕಾದಶಕಲಾ ಸಂಜ್ಞಿಕವಾದ ಎಕಾರಂ, ಇಂತು ಆ ಉ ಮ ಹ ಎ ಯೇಂಬೀಯೈದಕ್ಕರಂಗೂಡಿದ ಸಾವಶ್ಯಪ್ರಣವಂ, ಸದಾಶಿವನ ಸೌಮ್ಮಮುಖದೊಳಾವಿರ್ಭಾವವಾಯಿತ್ತು. ಮತ್ತಂ, ಸಾಯಜ್ಯಪ್ರಣವವೆಂತೆನೆ- ಆದಿಪ್ರಕೃತಿ ಸಂಜ್ಞಿತಮಾದ ಆಕಾರಂ ಸ್ವರಪಂಚಮಾಂತಮಾದ ಉಕಾರಂ ಷಡ್ವರ್ಗಾಂತವಾದ ಮಕಾರಂ ಗುಹ್ಯ ಸಂಜ್ಞಿಕವಾದ ಹಕಾರಂ ಚತುರ್ದಶಕಲಾ ಸಂಜ್ಞಿಕವಾದ ಔಕಾರಂ. ಇಂತು ಆ ಉ ಮ ಹ ಔ ಯೆಂಬೀಯೈದಕ್ಕರಂಗೂಡಿದ ಸಾಯುಜ್ಯಪ್ರಣವವೆ, ಸದಾಶಿವನೂರ್ಧ್ವಮುಖದೊಳುದಿಸಿತ್ತೀ ತೆರದಿಂ ಪಂಚಪ್ರಣವಂಗಳಕ್ಕರಂಗಳ್ಸಂಖ್ಯಾಯುಕ್ತಂಗಳಾಗಿರ್ಕುಮಾ ಸಕಲಮಾತ್ರಾಂತಸ್ಥಮಾಗಿ ಹ ಎಂಬಕ್ಕರಮಗಣ್ಯಮಾಗಿರ್ಪುದೆಂದು ಪಂಚಪ್ರಣವಭೇದಮಂ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.