ಕಪಿ ಕಳ್ಳ ಕುಡಿದು,
ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು
ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು.
ಆದಿಯಲ್ಲಿ ನಿನ್ನ ಗರ್ಭಾಂಬುಧಿಯಲ್ಲಿ ಜನಿಸಿ ನಿನ್ನ ನೆನಹಿಲ್ಲದೆ
ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ
ಪ್ರಾಣಲಿಂಗವನರಿಯದ ಪರಮಪಾತಕರ
ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ
ತಂದೆ-ತಾಯಿ ಬಂಧು-ಬಳಗವೆಂದು ಭಾವಿಸಿದ
ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ
ನಿಂದ ಠಾವಿಂಗೆ ನೀರ್ದಳಿವರಯ್ಯ
ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ
ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ.
ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ.
ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ
ಮಾಡಿತಯ್ಯ ಎನ್ನ ಮಾಯೆ.
ಓರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ
ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ.
ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ.
ನಿನ್ನನೇ ಜನನೀ ಜನಕರೆಂಬ,
ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು,
ಜಾಗ್ರತ್ ಸ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ,
ಅಕ್ಕರಿಂದ ರಕ್ಷಿಪುದಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Kapi kaḷḷa kuḍidu,
kaḍala dāṇṭuvenendu laṅghisi naḍunīrinalli biddu
mīnu mosaḷege āhāravādantāyitayya enna bāḷu.
Ādiyalli ninna garbhāmbudhiyalli janisi ninna nenahillade
iṣṭaliṅgavanariyada parama kaṣṭajīvigaḷa
prāṇaliṅgavanariyada paramapātakara
bhāvaliṅgavanariyada bhavakkoḷagāda hulumānavara
tande-tāyi bandhu-baḷagavendu bhāvisida
balu pātakavennanaṇḍaledu, amardappi agalada kāraṇa
ninda ṭhāviṅge nīrdaḷivarayya
kuḷita ṭhāviṅge hōmavanikkisuvarayya
nānu banda baṭṭeyoḷagōrvaru bārarayya.
Kālanāḷiṅge kālduḷiyādenayya.
Śunaka sūkarādigaḷa basiralli baruvante
māḍitayya enna māye.
Orvarige huṭṭi mattōrvarige appā emba
nāṇṇuḍiya dr̥ṣṭavenagāyitayya guruve.
Ī dōṣamaṁ karuṇadiṁ kaḷedu śud'dhanaṁ māḍi.
Ninnanē jananī janakaremba,
ninna bhaktaru bandhu baḷagavemba sujñānamaṁ koṭṭu,
jāgratsvapna suṣuptiyalli ninnattalenna mukhava māḍi,
akkarinda rakṣipudayyā
ghanaliṅgiya mōhada cennamallikārjuna.