Index   ವಚನ - 18    Search  
 
ಅರ್ಪಿತ ಅವಧಾನದ ಕ್ರಮವ ವಿಸ್ತರಿಸಿ ಒಪ್ಪವಿಟ್ಟು ಹೇಳಿಹೆ ಕೇಳಿರಣ್ಣ ಭಿನ್ನಭೋಜನ ಪ್ರಸಾದಭೋಜನ ಸಹಭೋಜನವೆಂದು ಲಿಂಗಾರ್ಪಿತ ಮೂರು ಪ್ರಕಾರವಾಗಿಪ್ಪುದು. ಮುಂದಿಟ್ಟು ಸಕಲ ಪದಾರ್ಥವಂ ಇಷ್ಟಲಿಂಗಕ್ಕೆ ಕೊಟ್ಟು ಆ ಲಿಂಗಮಂ ಸೆಜ್ಜೆಯರಮನೆಗೆ ಬಿಜಯಂಗೈಸಿ ಅಂದಂದಿಂಗೆ ಬಂದ ಪದಾರ್ಥಮಂ ಲಿಂಗಕ್ಕೆ ಕೊಡದೆ ಕೊಂಬುದೀಗ ಭಿನ್ನಭೋಜನ. ಮುಂದಿಟ್ಟ ಸಕಲಪದಾರ್ಥಂಗಳು ಲಿಂಗಕ್ಕೆ ಒಂದು ವೇಳೆ ಕೊಡದೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಆ ಭೋಜ್ಯಮಂ ಇಳುಹದೆ ಕೊಂಬುದೀಗ ಪ್ರಸಾದಭೋಜನ. ಮುಂದಿಟ್ಟು ಸಕಲಪದಾರ್ಥಂಗಳ ಲಿಂಗಕ್ಕೆ ಮೊದಲು ಕೊಟ್ಟು ಮತ್ತೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಕೊಂಬುದೀಗ ಸಹಭೋಜನ. ಇಂತೀ ತ್ರಿವಿಧ ಭೋಜನದ ಅಂತರಂಗದನ್ವಯವ ನಿಮ್ಮ ಶರಣರೇ ಬಲ್ಲರಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.