Index   ವಚನ - 19    Search  
 
ಪಿಂಡಬ್ರಹ್ಮಾಂಡಗಳಿಲ್ಲದಂದು ಅಷ್ಟದಿಕ್ಪಾಲಕರ ಹುಟ್ಟಿಲ್ಲದಂದು ನಿಷ್ಕಳ ಪರಂಜೋತಿ ತಾನೊಂದೆ ನೋಡಾ. ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ ಮಹಾಲಿಂಗವೆನಿಸಿತು. ಆ ಮಹಾಲಿಂಗವೇ ತನ್ನ ಪರಮಾನಂದದಿಂದ ಪ್ರಸಾದಲಿಂಗವೆಂದು ಜಂಗಮಲಿಂಗವೆಂದು ಶಿವಲಿಂಗವೆಂದು ಗುರುಲಿಂಗವೆಂದು ಆಚಾರಲಿಂಗವೆಂದು ಹೀಂಗೆ ಪಂಚಲಿಂಗವೆನಿಸಿತು.ಆ ಪಂಚಲಿಂಗಂಗಳ ಪ್ರಾಣ ಅಂಗ ಮುಖ ಪದಾರ್ಥಂಗಳಾವುವೆಂದರೆ ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಆಚಾರಲಿಂಗವೇ ಅಂಗ. ಆ ಅಂಗಕ್ಕೆ ಆಚಾರಲಿಂಗದ ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ಗಂಧಂಗಳೇ ದ್ರವ್ಯಪದಾರ್ಥ. ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಗುರುಲಿಂಗವೇ ಅಂಗ. ಆ ಅಂಗಕ್ಕೆ ಗುರುಲಿಂಗದ ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ. ಶಿವಲಿಂಗಕ್ಕೆ ಜಂಗಮಲಿಂಗವೇ ಪ್ರಾಣ ಆ ಪ್ರಾಣಕ್ಕೆ ಶಿವಲಿಂಗವೇ ಅಂಗ ಆ ಅಂಗಕ್ಕೆ ಶಿವಲಿಂಗದ ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ. ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಜಂಗಮಲಿಂಗವೆ ಅಂಗ ಆ ಅಂಗಕ್ಕೆ ಜಂಗಮಲಿಂಗದ ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ಸ್ಪರ್ಶಂಗಳೇ ದ್ರವ್ಯಪದಾರ್ಥ ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಪ್ರಸಾದಲಿಂಗವೇ ಅಂಗ ಆ ಅಂಗಕ್ಕೆ ಪ್ರಸಾದಲಿಂಗದ ಆಚರಾದಿ ಪ್ರಸಾದಲಿಂಗಗಳೇ ಪಂಚಮುಖ ಆ ಮುಖಂಗಳಿಗೆ ಪಂಚಪ್ರಕಾರದ ಶಬ್ದಂಗಳೇ ದ್ರವ್ಯಪದಾರ್ಥ ಈ ಪ್ರಕಾರದಲ್ಲಿ ಪಂಚಲಿಂಗಂಗಳ ಪ್ರಾಣ ಅಂಗ ಮುಖ ಪದಾರ್ಥ ಇಂತಿವರ ನೆಲೆಯ ತಿಳಿದು ತಟ್ಟುವ ಮುಟ್ಟುವ ಸುಖಂಗಳ ಆಯಾ ಮುಖಂಗಳಿಗೆ ಕೊಟ್ಟು ತೃಪ್ತಿಯ ಭಾವದಿಂದ ಮಹಾಲಿಂಗಕ್ಕೆ ಸಮರ್ಪಿಸುವ ಅವಧಾನ ನಿಮ್ಮ ಶರಣರಿಗಲ್ಲದೆ ಮಿಕ್ಕ ಜಡಜೀವಿಗಳೆತ್ತ ಬಲ್ಲರೋ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.