Index   ವಚನ - 20    Search  
 
ಎನ್ನ ಮನೋಮಧ್ಯದೊಳಗೊಂದು ಅನುಮಾನ ಅಂಕುರದೋರಿತು ಕೇಳಾ ಎಲೆ ತಂಗಿ. ಲಿಂಗಾಣತಿಯಿಂ ಬಂದ ಪದಾರ್ಥವ ಮನವೊಪ್ಪಿ ಲಿಂಗಕ್ಕೆ ಕೊಟ್ಟುದೇ ಪ್ರಸಾದ. ಆ ಪ್ರಸಾದದೊಳಗಿದ್ದುದೇ ರಸ. ಹೊರಗಿದ್ದುದೇ ಹಿಪ್ಪೆ. ಮತ್ತಂ ಒಳಗಿದ್ದುದೇ ಮಧುರ. ಹೊರ ಹೊರಗಿದ್ದುದೇ ಕಠಿಣ. ಕರುಣಿಸಿಕೊಂಬುದೇ ಸುಖಿತ. ಅದ ನುಡಿಯಲಂಜಿ ನಡುಗುತಿಪ್ಪೆನಯ್ಯ. ಅದೇನು ಕಾರಣ ನಡುಗುತಿಪ್ಪೆನೆಂದರೆ ಪ್ರಸಾದವೇ ಪರತತ್ವವೆಂದು ಪ್ರಮಥಗಣಂಗಳ ಸಮ್ಯಜ್ಞಾನದ ನುಡಿ ಉಲಿಯುತ್ತಿದೆ. ಇದು ಕಾರಣ- ಪ್ರಸಾದವೆಂಬ ಪರತತ್ವದಲ್ಲಿ ಜ್ಞಾನ ಅಜ್ಞಾನಗಳೆರಡೂ ಹುದುಗಿಪ್ಪವೆಂದು ನಾನು ನುಡಿಯಲಮ್ಮೆ. ತಥಾಪಿ ನುಡಿದರೆ, ಎನಗೆ ಮರ್ತ್ಯಲೋಕದ ಮಣಿಹವೆಂದಿಗೂ ತೀರದೆಂದು ಕಠಿಣ ಪದಾರ್ಥವ ಲಿಂಗಕ್ಕೆ ಕೊಟ್ಟು ಕೊಳಲಮ್ಮೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.