Index   ವಚನ - 6    Search  
 
ಗುರುಕರುಣಮಂ ಪಡೆದು ಅನುಭವಿಸುವಂಥ ತ್ರಿವಿಧ ಸಂಧಾನಗಳು ಉದಯ ಮಧ್ಯಾಹ್ನ ಸಾಯಂಕಾಲವನು ಆದಿ ಬೀಜಾಕ್ಷರ ಓಂ ಪಥಮಂ ನೆಲೆಗೊಂಡು, ಸಾಧನಚತುಷ್ಟಯದಿಂದತ್ತತ್ತಲು ಬೋಧ ನಿರ್ಗುಣವೆಂಬ ನಿರಾಭಾರಮಂ ತಾಳಿ, ಅಂಗಚತುಷ್ಟಯ ಸಂಗಸಮರಸಭಾವಮಂ ಬೆಸಗೊಂಡು. ಭಂಗಗೇಡಿಗಳ ಅಂಗವಿಕಾರದಿಂದ ಸಿಂಗರಿಸಿರಿ. ಮಹಾಲಿಂಗದಲ್ಲಿ ಜ್ಞಾನಚತುಷ್ಟಯವೆಂಬ ಫಲಗಳನ್ನು ಭುಂಜಿಸಿ, ಅಂಜನದೇವಿಯರ ಒಡಗೂಡಿ, ಆದಿಬೀಜಾಕ್ಷರ ಮೂಲಮಂತ್ರದ ನೆಲೆಯ ಮನೆಯಲ್ಲಿ ಭಕ್ತಿಗೋಸ್ಕರವಾಗಿ ಭಿಕ್ಷಾಟನಕ್ಕೆ ಅಸೋಜಿಗವಾದ ಜಂಗಮರೂಪದಿಂದನುಭವಿಸಿ ಶಿವಸುಖಸಾರಾಯಮಂ ಉದಯಾಸ್ತಮಾನದೊಳು ವೇದವಾಕ್ಯ ಶ್ರುತಿ ಪುರುಣಾಗಮೋಕ್ತದಲ್ಲಿ ಭಜನೆಯನು, ನಡೆನುಡಿ ಒಂದಾದ ತೆರನನು, ಬೂದಿಬಡಕರ ಸಂಗದಿಂದ ಗಾದಿಗೋಷ್ಠಿಯಿಲ್ಲದೆ ಮಹಾದ್ವಾರದ ಹೊರಭಾಗಿಲಲ್ಲಿ ಕುಳಿತು, ತ್ರಿವಿಧಕ್ಕೆ ತ್ರಿವಿಧ ಪದಾರ್ಥಮಂ ಕೊಟ್ಟು, ಬೀದಿಬಾಜಾರದಲ್ಲಿ ದಿನಸಿಯಿಲ್ಲದ ಅಂಗಡಿಗಳನ್ನು ಕಟ್ಟಿಕೊಂಡು, ಆಧಾರಕ್ಕೆ ಅಗೋಚರವಾಗಿ ವಿಧವಿಧದಿಂದ ಶೋಧನ ಗುಪ್ತಾಂತರಮಂ ನಡೆಸಿ, ಊರ್ಧ್ವ ಅಧೋರ್ವ ತತ್ಪೂರ್ವವೆಂಬ ಮದೋನ್ನತ್ತದಿಂದ ಶೂಲವನಿಕ್ಕಿ ಪರಿಶೋಧನ ಪರಮಪ್ರಕಾಶವಾಗಿದ್ದಿಯಲ್ಲದೆ, ಪರಸಾಧನವೆಂಬ ನಾಟ್ಯವನಾಡಿ ಪಾರಮಾರ್ಥಗುರು ಸಮರ್ಥ ನೀನಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ. ಗುರುಸ್ಥಲದ ಅಭಿಪ್ರಾಯ ಸಮಾಪ್ತ ಮಂಗಳಮಸ್ತು. ಶ್ರೀ ಶ್ರೀ ಶ್ರೀ ಗುರುಕೃಪಾವಸ್ತೆಯನು ತಿಳಿಯುವುದಕ್ಕೆ ಸೂಚನಾರ್ಥಮಂ ಅಹೋ ಸಾರಾಯಮಂ ಶ್ರೀಗುರು ಪೇಳಿದನು|| ವಚನ ||