ಮತ್ತಂ ನಾನು ನೀನೆಂಬುದೆನಗೆ ಸಾಕು ಬೇಕೆಂಬುವಂಥದು,
ಪ್ರಾಯಶ್ಚಿತ್ತವಲ್ಲದೆ ಸಾಲದ ಸಾಕು, ನಾನೇ ನೀನೆಂಬುದೆ ನೀತಿ.
ಶಾಸ್ತ್ರ ಶಿವಾನುಭಾವವೆಂಬ ಪ್ರತಿಚ್ಛಾಯೆ ಮಮಕಾಯ
ಮಂತ್ರನ್ಯಾಯ ನೀನೆಂದು ಶೃತಿ ವಿಸ್ಮೃತಿ ಪರಶ್ರುತಿಗಳನು
ಸಾಕುತಿರ್ಪವಲ್ಲವೆ ನಡೆನುಡಿ ನಿಲುಕಡೆಯೆಂಬ ಮಹಾದ್ವಾರದಲ್ಲಿ ಕುಳಿತು,
ಅಡಕವಾದಾತ್ಮರುಗಳಲ್ಲಿ ಅನುಭವಿಸಿ ಬೆಡಗು ನಿರ್ಮಾಯಮಂ ಆವರಿಸಲು
ಬೇಡಿದ ಪಡಿಪದಾರ್ಥವನು ಕೊಟ್ಟು,
ನಾಡನಾಳ್ವವ ಐಶ್ವರ್ಯೋಪಚಾರದಲ್ಲಿ ತಿರಿದುಂಡು,
ಪಿಶಾಚಿವೇಷವನ್ನು ಧರಿಸಿಕೊಂಡು ಈಶ್ವರ ನಾಮವೆಂದು ಹೇಳಿಕೊಂಬುವಂಥ
ಪಾರಮಾರ್ಥದ ಅಭಿಪ್ರಾಯವಲ್ಲದೆ, ಶರಣಜನ ಸನ್ನಹಿತ ನೀನಲ್ಲದೆ,
ಕರುಣಾಂತಃಕರಣ ಪೂರ್ಣಜ್ಞಾನಾಂಬುಧಿ ದೈವವೆಂದು ವರ್ಣರತ್ನಾಕಾರಕ್ಕೆ ಕಾರಣ
ನಿರಾಕಾರವಲ್ಲದೆ, ಕರುಣಿ ಗುರುರಾಯ ಈ ಕಾಕುಪುರಾಣ ಯಾಕೆ ಬೇಕು?
ಸಾಕುಬೇಕೇನಲೊಲ್ಲದೆ ಜೋಕೆಮಾಡು ಗುರುವೆ ಎನ್ನನು,
ನಿಜಗುರು ನಿರಾಲಂಬ ಪ್ರಭುವೆ.
ಮತ್ತಂ ತನ್ನ ತಾನೆಂಬುದೆ ಪರಿಶಾಸನ.ಪ್ರಸ್ಥಾನುಸಾರ ಮನೆದೈವವೆಂಬುದೆ
ಕಾರಣಾರ್ಥದಲ್ಲಿ ನಿವಾರಣವೆಂಬ ಪರತರನ್ಯಾಯಮಂ ಸೇರ್ಪಡೆಯಾದ
ಗುರುಲಿಂಗ ಮೂರತಿ ಹೇಳಿದನು. ||ವಚನ||
Art
Manuscript
Music
Courtesy:
Transliteration
Mattaṁ nānu nīnembudenage sāku bēkembuvanthadu,
prāyaścittavallade sālada sāku, nānē nīnembude nīti.
Śāstra śivānubhāvavemba praticchāye mamakāya
mantran'yāya nīnendu śr̥ti vismr̥ti paraśrutigaḷanu
sākutirpavallave naḍenuḍi nilukaḍeyemba mahādvāradalli kuḷitu,
aḍakavādātmarugaḷalli anubhavisi beḍagu nirmāyamaṁ āvarisalu
bēḍida paḍipadārthavanu koṭṭu,
nāḍanāḷvava aiśvaryōpacāradalli tiriduṇḍu,
piśācivēṣavannu dharisikoṇḍu īśvara nāmavendu hēḷikombuvantha
pāramārthada abhiprāyavallade, śaraṇajana sannahita nīnallade,
Karuṇāntaḥkaraṇa pūrṇajñānāmbudhi daivavendu varṇaratnākārakke kāraṇa
nirākāravallade, karuṇi gururāya ī kākupurāṇa yāke bēku?
Sākubēkēnalollade jōkemāḍu guruve ennanu,
nijaguru nirālamba prabhuve.
Mattaṁ tanna tānembude pariśāsana.Prasthānusāra manedaivavembude
kāraṇārthadalli nivāraṇavemba parataran'yāyamaṁ sērpaḍeyāda
guruliṅga mūrati hēḷidanu. ||Vacana||