Index   ವಚನ - 18    Search  
 
ಏಕಾರ್ಥಂ ಬೆರೆದು ಉತ್ತರಾರ್ಥದಲ್ಲಿ ಚಿತ್ರ ವಿಚಿತ್ರವೆಂಬ ಎಲ್ಲ ಸತ್ತುಚಿತ್ತಾನಂದ ಪರಿಪೂರ್ಣಮಯವಾಗಿ ನಿತ್ಯನೇಮಂಗಳಿಲ್ಲದೆ, ಯತ್ನವಿಲ್ಲದೆ ಪ್ರಯತ್ನಮಂಬಟ್ಟು, ಪತ್ನಿ ಪೀತಾಂಬರ ಶಾಲಿಯನುಟ್ಟು, ವಚನ ಸಂಪಾದಿಸಲಿಲ್ಲವೆಂದು ಮಾತಿನ ಅಂತರಾರ್ಥ ಸ್ಥಿತಿಗತಿಮತಿ, ಈ ಚೈತನ್ಯವಾದುದೊಂದು ಅನರ್ಥಮಂ ಅಭಿಪ್ರಾಯ ಕರುಣಿ ಗುರುರಾಯನನು ಸೂತ್ರಾರ್ಥ ತೂರ್ಯಜ್ಞಾನ ಪ್ರಯುಕ್ತ ಮನನ ಮಾತೃಸ್ಥಾನವಾಗಿರ್ಪುದು. ಸತ್ಯವಿದನು ಶತ್ರುಗಳಿಗೆ ಅಸಾಧ್ಯವಾಗಿ ತೋರುವನಲ್ಲದೆ, ಮಿತ್ರಬಾಂಧವರನೆಲ್ಲ ಪ್ರಾಪ್ತಾನುಸಾರ ಮನೆದೈವವನೊಡಗೂಡಿ ಅರುಹಾಬ್ದಿಯಲಿ ಆರೂಢಪಥಮಂ ನೇಮಿಸಲು, ಗಾರುಡಮಂತ್ರವೆಲ್ಲವನು ಸುಮಾರ್ಗಾಚರಣೆ ಆನಂದಮಯವಾಗಲು, ನಿವಾರಣದೊಳಗಣ ಕಾರಣತ್ರಯವೆಂಬ ಸೂತ್ರದಾರವು ಬೆರೆದೇಕಮಯವಾದುದರಿಂದ ಅಪರಿಮಿತ ದ್ರವ್ಯವದೆಲ್ಲ ಉಪಜೀವಿಗಳಿಗೆಲ್ಲ ದೊರಕುವುದು, ನಿರುಪಮ ನಿರ್ಮಾಯ ನಿರ್ಮೋಹಿಗಳಾದ ಮನೋಭಾವಿಗಳಿಗೆ ಅಪರಿಮಿತ ಪದಾರ್ಥವದು ಸಂಬಂಧವಾಗುವುದಲ್ಲದೆ, ಸಂಶಯ ಬಿಡುಗಡೆಯಾಗದಂಥ ಆಶಾಲಾಂಛನಧಾರಿಗಳಿಗೆಲ್ಲಿಯದೋ ಬೇಸರ ನುಡಿ. ಜೀವಿಗಳಿಗೆ ಅಸಾಧ್ಯವ ತೋರಬಾರದೆಂದು, ತನ್ನ ತಾನೆಂಬುದೊಂದು ಪರಿಶಾಸನಾನುಸಾರ ಮನೆದೈವವನೊಡಗೂಡಿ, ಪರಮ ಗುರುರಾಯ ತನ್ನ ತಾನೆಂಬುದೆ ಪರಿಶಾಸನವಯ್ಯಾ, ನಿಜಗುರು ನಿರಾಲಂಬಪ್ರಭುವೆ.