Index   ವಚನ - 19    Search  
 
ಮತ್ತಂ ತನ್ನ ತಾನೆಂಬುದೆ ತೂರ್ಯಜ್ಞಾನಪ್ರಯುಕ್ತ, ಮನನವು ನಿಜ ಅಭ್ಯಾಸಮಾಗಿಹುದರಿಂದ ಸೋಜಿಗದೊಳಗಣ ಅಸೋಜಿಗಮೆಂದೆನಲಹುದು. ರಾಜಾರ್ಥನ್ಯಾಯಮನಿಕ್ಕಲು ಹೋಗುವುದೆ ಆಗಲರಿಯದು. ಆದಿಶಿಷ್ಯ ಆದಿಗುರು ತಾನು ಬೀದಿಬಾಜಾರದೊಳಗೊಂದು ಉದರಾರ್ಥಉದ್ಯೋಗಮಂ ನೇಮಿಸಲು, ಅದರ ತಾತ್ಪರ್ಯ ಹೇಳಲುದ್ಯೋಗಿಸಿದರೆ, ಆಶ್ಚರ್ಯ ಪರಮಾಶ್ಚರ್ಯವಾಗಿರ್ಪುದದರಿಂದ, ಈ ಅಧಮ ಚಾಂಡಾಲರು ಸಾವಧಾನದಿಂದ ಬಗೆ ಸೂತ್ರ ಕುಲಗೋತ್ರಮಂ ತಿಳಿಯದೆ, ಪರ್ಯಾಯದಲಿ ಉದರಪೋಷಕರಾಗಿ ಬೆದರಿಕೊಳ್ಳದೆ, ಆದಿ ಅನಾದಿ ಪರಶಿವನು ದೈವವೆಂದು ಸನ್ಮೃದುವಾಕ್ಯಗಳಿಂದ ಸಹವಾಸಮಂಬಟ್ಟು, ಗಾದಿ ಗೋಷ್ಠಿಗಳಿಲ್ಲದೆ ಆನಂದಮಯ ಲೀಲೆಯಲ್ಲಿ ಮನೋ ಅಭ್ಯಾಸಿಗಳಾಗದೆ, ಜ್ಞಾನಾಮೃತವನು ಸ್ವೀಕರಿಸದೆ, ಬರಿದೆ ಬ್ರಹ್ಮವನು ಕೂಗುತಿರ್ಪರಲ್ಲದೆ, ಆದಿಶಿಷ್ಯ ಅನಾದಿ ಗುರುವಿನಿಂದ ಉದ್ಭವಿಸಿದಂಥ ಉದರಾರ್ಥ ಉದ್ಯೋಗ ಪಾರಮಾರ್ಥ ಪರಮ ಶ್ರೀಗುರು ಸಮರ್ಥ ನೀನೆಂದು ನಮಿಸಲರಿಯದೆ, ಮದೋನ್ಮತ್ತದಿಂದ ವಾದ ವಾಗ್ಮೂಲಗಳನ್ನು ಕಲಿತು, ಬೋಧ ನಿರ್ಗುಣತ್ವಮಂ ಮರೆದು, ಸಾಧು ಸುಮಾರ್ಗಮಂ ಬೋಧಿಸದೆ, ವಿಧಿ ಪ್ರತಾಪದಿಂದ ತಿರಿದುಂಡು ಸಾಕುಬಾರದೆ. ಬದುಕಿದೆವೆಂದು ಕುದಿಕುದಿದು ಸಾವರಲ್ಲದೆ, ಅಧರ್ಮ ಮೂಢಜನರು ಉದಯ ಮಧ್ಯಾಹ್ನ ಸಾಯಂಕಾಲದಲಿ ನಿನ್ನ ವಂಶಾಬ್ಧಿಕನಾದ ಶಿಷ್ಯೋತ್ತಮನು ತನ್ನ ಅಭಿಪ್ರಾಯದೊಳಗೊಂದು ತನ್ನ ತಾನೆ ಪ್ರತಿಚ್ಛಾಯೆಯೆಂದು ಯೋಚನೆಯಂ ಮಾಡಲು, ಸೂಚನಾರ್ಥಗಳಲ್ಲಿ ತಿಳಿತಿಳಿದು ಸುಮಾರ್ಗಮಂ ತನ್ನ ತಾನೆಂಬುದದರಿಂದಾಚರಣೆ ಸೈರಣೆಗೆ ಸಮಾನವಾದ ಕರುಣಿ ಗುರುರಾಯ ತನ್ನ ತಾನೆಂದು ಆವರಿಸಿಕೊಂಡಿರ್ಪೆಯಯ್ಯಾ, ನಿಜಗುರು ನಿರಾಲಂಬಪ್ರಭುವೆ.