Index   ವಚನ - 24    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯನೆ ಕೇಳು. ಎನ್ನರುವಿನಳಗೊಂದು ಪಿರಿದಪ್ಪ ದೊಡ್ಡಿತವಾದ ಹೆಡ್ಡಕುರುಬನು ಮನೆ ಕಟ್ಟಿಕೊಂಡಿರ್ಪನು. ಮನ್ಮಥ ವಿಕಾರದಿಂದ ಸನ್ಮತವಾಗಗೊಡೆಲೊಲ್ಲದೆ, ಉನ್ಮನದಾಚಾರದಲ್ಲಿ ಪುಣ್ಯರೂಪ ವಿಚಾರವನು ತಿಳಿಗೊಡದಾದ ಕಾರಣ, ಏನೆಂದರಸುವೆನು ಜ್ಞಾನಬಹನಾಗಿ. ಮನಸ್ಸಾಕ್ಷಿಯಿಲ್ಲದೆ ಜನನಮರಣಂಗಳಲ್ಲಿ ಬಂಧಿಸಿರ್ಪುದು ಇಂದೆನ್ನ. ನಿಮ್ಮ ಬಾಧ್ಯವೆಂದು ಕಂದನೆಂದು ಸಲುಹಿ, ನಂದಿಮುದ್ರೆಯ ಕೊಟ್ಟು, ಬುದ್ಧಿಹೀನನ ಮಾಡದೆ, ಬದ್ಧಭವಿಗಳ ಸ್ನೇಹದಿಂದ ಗುದ್ದಾಟವ ತಂದೊಡ್ಡದೆ, ಮಾನವನೆಂದು ಕಾಣಿಸಿಕೊಳ್ಳದೆ ನಿಮ್ಮ ಶಿವಶರಣರ ಸಂಗಸುಖಮಂ ಪರಿಣಮಿಸುವುದರಿಂದ ಎನಗೆ ಜ್ಞಾನರಂಜನೆಯಾಗುವುದಲ್ಲದೆ, ಧ್ಯಾನಿ ಸುಮ್ಮನಿರಬಾರದೆಂದು ನಿನ್ನನರಿದಾತ್ಮಾಂತರಂಗದಲ್ಲಿ ಮನವ್ಯಸನವಿಲ್ಲದೆ ದಿನಂಪ್ರತಿಯಲಿ ಅಪ್ರತಿಮ ಮಹಿಮ ನೀನೆಂದು ಮನಮನ ವತನದಲ್ಲಿ ಕುಳಿತು ಘನಪದಾರ್ಥಮಂ ಭೋಗಿಸುವೆನೆಂದು ನಿಮ್ಮ ನಾಮದ ಬೆಡಗ ಆಡಿ ಹರಸುತಿರ್ಪುದೊಂದು. ತಮ್ಮ ತಮ್ಮ ನ್ಯಾಯ ಹೊನ್ನು ಹೆಣ್ಣು ಮಣ್ಣಿನೊಳಗಿರ್ದುದು. ಕಾರಣ ತನ್ನನ್ನು ಬೆನ್ನಟ್ಟಿ ಬಾರಿಸುವನಲ್ಲದೆ, ತನ್ನ ಪ್ರತಾಪವನು ಕಣ್ಣಿನೊಳಗಿಟ್ಟುಕೊಂಡು ಬಣ್ಣಕ್ಕೆ ಬಾರದಿರ್ದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಅಯ್ಯಾ ಗುರು ಮಹಾರಾಜಾ ಶಂಭೋ, ಎನ್ನನ್ನು ನಿಮ್ಮ ಕಾರಣಿಕರ ಮಾಡಿ ಸಲಹು ಕಂಡಯ್ಯಾ ಎಲೆ ಲಿಂಗವೆ, ನಿಜಗುರು ನಿರಾಲಂಬಪ್ರಭುವೆ.