Index   ವಚನ - 25    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯನೆ ಕೇಳು: ಈ ಅಳಿಯನ ಅಭಿಮಾನವನು ಹರಿಸೆ, ನಿನಗಲ್ಲದೆ ಇಂಥ ಮೂಳ ಪರಮ ಚಾಂಡಾಲ ಅಜ್ಞಾನ ಮೂಢಾತ್ಮರು ಬಲ್ಲರೆ? ಅರಿಯರು. ಪಂಥವ ಮಾಡುವರಯ್ಯಾ ಸಂತೆಯ ಸೂಳೆಮಕ್ಕಳಿವರು. ಮತ್ತಿನ ಭಕ್ತರಲ್ಲದೆ ಚಿಂತೆ ಮಾಡುತಿರ್ಪರಯ್ಯಾ. ಇಂತಿವರೊಳಗೆ ನಾನೆಂತು ಜೀವಿಸುವೆನಯ್ಯಾ. ನ್ಯಾಯವಿಲ್ಲದ ಅನ್ಯಾಯವ ನುಡಿವವರ ಸಂಗದಿಂದೊಂದು ಬೆಡಗು ಬಿನ್ನಾಣವಾಗಲು, ಮೃಡರೂಪದಿಂದುದ್ಭವಿಸಲಾಗ ನುಡಿಜಾಣನಾದುದರಿಂದ ಇಂಥ ಗಾಢಮೂಢವಿದ್ಯೆಗಳೆಲ್ಲ ಬಲ್ಲೆವೆಂದು ಮೂಢಾತ್ಮರು ಕಡುಕೋಪದಿಂದ ದುಡುಕುವರಲ್ಲದೆ, ಬಡಿವಾರಮಂ ಸಾಕುಸಾಕೆಂದು ಮತ್ಸರವೆಂಬ ಛಲವನು ಗಟ್ಟಿಗೊಂಡು ಎಚ್ಚರಿಲ್ಲದೆ ಹುಚ್ಚುಚ್ಚಾಗಿ ಬೊಗಳುವರಯ್ಯಾ ನಿಮ್ಮನರಿಯದಧಮರು. ನಾ ನಿಮ್ಮ ಅಚ್ಚ ಪ್ರಸಾದಿಯಾಗಿ ಮುಂಚೆ ಹೋಗಬಾರದೆಂದು ಸಂಚಿತಕರ್ಮವನು ಅಂಜಿಕೆಯಿಂದ ನಿಮಗರ್ಪಣವ ಮಾಡಿ ಮುಚ್ಚಿಕೊಂಡಿರುವೆನಲ್ಲದೆ, ಮೂರಾರು ಮುವತ್ತಾರು ಉತ್ತರಕ್ಕೆ ಆದುದು ಅರುವತ್ತಾರು. ತೊತ್ತಿನೊಳಗೊಂದು ಸತ್ಯ ಅನಿತ್ಯವಿಲ್ಲದೆ, ಉತ್ತಮಾಂಗದಲ್ಲಿ ಚಿತ್ತಪಲ್ಲಟಲಾಗದೆ ಎತ್ತಿ ಮುದ್ದಾಡುವಂಥದು. ಸತ್ಯಮಂ ಕೊಡು ಕೊಡು ಎಂದು ಸ್ತೋತ್ರವ ಮಾಡುವಂಥದೆ ಗುರು ಶಂಭುಲಿಂಗವೆ. ನಾನಾವ ಕಡೆಯಲಿ ಅದ್ವೈತರೂಪವಾದುದೊಂದು ಆತ್ಮವಿಚಾರವನು ತಿಳಿಗೊಡದೆ, ದೇವತಾಪುರುಷನಾಗಿ, ಸ್ವಾಭಾವಿಕ ನೀನಲ್ಲದೆ, ಆ ಮಹಾಗುರು ದೈವವೆಂದು ನಮೋ ನಮೋ ಎನುತಿರ್ದೆನಯ್ಯಾ. ನಮಸ್ಕಾರವೆಂದು ನಿಮ್ಮ ನಾಮಸ್ಮರಿಸುತಿರ್ಪೆನಯ್ಯಾ, ಅಯ್ಯಾ ಎಲೆ ಲಿಂಗವೆ, ನಿಜಗುರು ನಿರಾಲಂಬಪ್ರಭುವೆ.