Index   ವಚನ - 31    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಕೇಳು. ಇಂದಿನ ದಿವಸವೆಂದು ನಾಳಿನ ದಿವಸವನು ತಿಳಿದೆನೆಂಬುದೆ ಗಟ್ಟಿತನವ ಆಗಗೊಡದು. ಸುಳ್ಳೆನಲಾ ಜಗವ ನಡೆಸುವಂಥದು ತಳ್ಳಿಗಾರನ ಸಂಗವಲ್ಲದೆ, ಬಳ್ಳೇಶ ಮಲ್ಲಾರ್ಯರು ಇದೇ ಸುದಿವಸವೆಂದು ನಂಬಲು, ಬಳ್ಳದಲ್ಲಿ ಪ್ರತ್ಯಕ್ಷವಾಗಲಿಲ್ಲವೆ? ಇದು ಸುಳ್ಳೆಂದವರಿಗೆ ಯಮನ ಬಾಧೆ ಬಿಡದು, ತಪ್ಪಲರಿಯದು. ವಿಧಿಪ್ರತಾಪ ಬಿಡುಗಡೆಯಾಗುವುದು. ತಂದೆತಾಯಿಗಳ ಪೂಜಿಸಿದಂಥ ಗುರುಭಕ್ತಂಗೆ ಇಂದಿನ ದಿವಸವೆ ಸುಭಿಕ್ಷಕಾಲವೆಂದು ನಂಬಿಗೆಯಾದ ಕಾರಣ ಅವಿಮುಕ್ತಕ್ಷೇತ್ರದ ಶಿವನೊಳಗಡಕವಾಗಲಿಲ್ಲವೆ? ಈ ಮಾಯಾಂಶಿಕವಾದ ಅಧಮರು, ತಮ್ಮ ತಂದೆತಾಯಿಗಳ ನಿಂದಿಸುವುದರಿಂದ ಬಂಧನ ಪ್ರಾಪ್ತಿಗೊಳಗಾಗಿ. ಇಂದು ಶ್ರೀಗುರುನಾಥನೆಂದರಿಯದೆ, ಬೆಂದಮನ ನಿಲುಕಡೆಯಿಲ್ಲದೆ, ಅದು ನನ್ನದು, ಇದು ನನ್ನದುಯೆಂದು ಸಂದೇಹ ದುರ್ಮನ ಮೂಢರು ಇಂದ್ರಜಾಲದಲ್ಲಿ ಮುಳುಗುವರಲ್ಲದೆ, ಮಹೇಂದ್ರಜಾಲ ಇವರಿಗೆ ಬಾಲಬಡಕರಿಗೆ ನ್ಯಾಯತಾರ್ಥವಾಗದು. ಬಿಂದು ನಿಗ್ರಹವ ಮಾಡದೆ, ಮಹೇಂದ್ರ ಜಾಲವನು ಬಲ್ಲೆವೆಂದು ಹೇಳುವರ ಬಾಯಲ್ಲಿ ತೊಂದರೆನುಡಿ ತೊದಲ್ನುಡಿ ಬೊಗಳಿಕೊಂಬುವುದೆ ಸಾಕ್ಷಿಯಿಲ್ಲದೆ. ಇಂದಿನ ಸುಕೃತವಾಗಲರಿಯದು, ಅಂದಿನ ಜನ್ಮವದು ತಪ್ಪದು. ಈಗಿನ ಅವಸರಮಂ ಬಿಟ್ಟು, ನಾಳಿನ ಬೇಸರಮಂ ಮರೆದು, ಹೊ[ಗ]ಳಿಗನಾಗಿ ತೆತ್ತಿಗನಾಗಿ, ದಾಳೇಂದ್ರಿಪರ್ವತದಲ್ಲಿ ಮಾತಂಗನೆಂಬ ಮಂತ್ರಶಕ್ತಿಯುಳ್ಳ ಮಾತೃಸ್ಥಾನವೆಲ್ಲವನು ಅಳವಟ್ಟು, ಬಾಲಲೀಲಾ ವಾಕ್ಯಗಳಿಂದ ಹೇಳಿಕಿ ಕೇಳಿಕಿ ಕಳವಳಕಿ ತಿಳಿತಿಳಿ ದಾಡುವಂಥದು. ಚೆಲುವ ಸಾಂಬ ಶ್ರೀಗುರುನಾಥನೆಂದು ಹೇಳುವೆಯಲ್ಲವೆ ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.