Index   ವಚನ - 32    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಕೇಳು: ಬೆಳಗು ಮುಂಜಾನೆಯೆದ್ದು ಸೂಳೆಸೋಗು ಹಾಕಿಕೊಂಡು, ತಿಳಿನೀರು ತೆಂಗಿನ ನೀರು ಪನ್ನೀರು ಇಂದುಮಡಿಯನುಟ್ಟು ಅಂದಚೆಂದವಾದ ವಸ್ತ್ರಾಭರಣಂಗಳೆಲ್ಲವನಿಟ್ಟುಕೊಂಡು, ನೀ ನಿರಾಕಾರವಾದ ನೀರುವತ್ತು [?] ಬರುವಂಥದು. ನಾ ಕಂಡು ಬೆರಗಾದೆನಲ್ಲದೆ, ಎನ್ನ ನೀ ಮರೆಯದೆ ತಿಳಿ. ನೀರು ಪಾದದಲ್ಲೆರೆದು, ಸುಳಿನಾಭಿ ಮೂಮಧಯದಲ್ಲಡಗಿರ್ದ ತಾರಕತ್ರಯ ವಿಚಾರವೆಂಬ ಪತ್ರೆ ಪುಷ್ಪ ಸುಗಂಧ ದ್ರವ್ಯಂಗಳೆಲ್ಲವನು ಪಾದಕ್ಕೆ ಏರಿಸಲು ಪೂಜಿಸಲು, ಆಮೇಲೆ ಮಾಂಗಲ್ಯ ಸ್ವರೂಪವಾದ ತೆಂಗಿನ ನೀರು ಮಂಗಳಾರತಿಯನು ಎತ್ತಿ ಕಂಗಳ ಬೆಳಗಿನಿಂದ ಕರಮಂ ಜೋಡಿಸಿ, ಜಯಜಯ ಮೃತ್ಯುಂಜಯನೆಂದು ಮಂಗಳಾರತಿಯನಾಡುವುದರಿಂದ ಕಾರಣಾಂಗವೆಲ್ಲ ಗುರುಕರುಣವಾಗಿ, ಶರಣು ಶರಣಾರ್ಥಿಯೆಂದು ನಮಸ್ಕರಿಸಲು, ಶ್ರೀಗುರುನಾಥನು ತಿಳಿನೀರು ತೆಂಗಿನ ತೀರು ಎರಡರೊಳೊಂದು ಮೃಡ ಸಮರ್ಪಣವಾಗಲು, ಪನ್ನೀರ ಪ್ರತಾಪವಿರಲು ಅಮಾನ್ಯ ಸಾಮಾನ್ಯವೆಂದು ಹೇಳಿಸಿಕೊಳ್ಳದೆ ಚೆನ್ನಿಗ ವಿಟಪುರುಷನಾಗಿ, ಸೂಳೆಸೋಗಿಗೆ ಮೆಚ್ಚಿ, ಪನ್ನೀರು ನೇವರಿಸಿಕೊಂಡು, ಮೊದಲು ವೀಳ್ಯವನು ಕೊಡುಕೊಡುಯೆಂದು ಸೆಳೆಮಂಚದಲಿ ಕುಳಿತು ವೀಳ್ಯದ ಸವಿಗಾರನು ಜಾಲವನು ಹಾಕಿ, ಬಾಲಬೋಧಮಂ ಕೊಟ್ಟು, ಉಳಿಸ್ಯಾಡಿ ಕುಲಗೆಟ್ಟು ಬೆಳಗಾದ ಮೇಲೆ, ಹುಳ್ಳಗಿರು ಹೊರಗು ಬಾರದಿರು ಕಂಡ್ಯಾ ಎಂದು ಗಳಿಗೆ ಗಳಿಗೆ ಎಚ್ಚರಮಂ ಹೇಳಲು, ಆ ಬೋಳಶಂಕರ ಶ್ರೀಗುರುನಾಥನು, ಎಲೆ ಮೂಳ ಹೊಲತಿ ಎನ್ನ ಬಾಳುವೆ ಜೋಪಾನದಿಂದ ಮಾಡು ಕಂಡ್ಯಾ ಎಂದು ಹೇಳುವೆ ನೀನೆಯಲ್ಲವೆ, ಎಲೆ ಲಿಂಗವೆ ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.