Index   ವಚನ - 33    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ಕಾಳುದೇಹದೊಳಗೊಂದು ಕೀಳುಜೀವನುದ್ಭವಿಸಿ, ತೆಲುಮೇಲಾಗುವುದಲ್ಲದೆ, ಇಂದ್ರಜಾಲವಿದ್ಯೆಯನು ಕಲಿತು, ತಾಳದ ಮರದುದ್ದನಾಗಿ ಬೆಳೆದು ಕೂಳುನೀರುಗಾಣದೆ ಕಳ್ಳರಕ್ಕಸರ ಕೈಯಲ್ಲಿ ಸಿಕ್ಕು ಕೋಲಾಹಲನಾಗಿ ಬಡಿಸಿಕೊಂಬುವಂಥದು. ತನ್ನ ಗಂಡು ಹೆಣ್ಣಿನ ಅಂಗವಿಕಾರದಿಂದ ಕಂಗೆಟ್ಟು ತಿರುಗಬಾರದೆಂದು ಮೂಲದ್ವಾರಮಂ ತಿಳಿಸಿಕೊಡಿರೆಂದೆನಲು, ಕೀಳುಜೀವವನು ಬೇಡಿಕೊಳ್ಳುವುದು, ಬಾಡಿಗೆ ದುಡಿವಂಥದು, ಸಾಕುಸಾಕೆಂದು, ಎನ್ನ ನುಡಿಯ ಗುರುರಾಯ ಕೇಳುಕೇಳೆಂದು, ಅನಂತಕಾಲ ನಿಮ್ಮನು ಮರೆದ ಕಾರಣ, ಈ ನಿಮಿತ್ಯದಿಂದ ಅಜ್ಞಾನಜೀವನಾಗಿ, ಜ್ಞಾನವಿಲ್ಲದೆ, ತನ್ನಂತರಂಗದ ಶುದ್ಧಿಯನು ತನಗೆಚ್ಚರವಿಲ್ಲದೆ ಮುನ್ನಿನ ಸ್ವಭಾವವನು ಮರೆದು, ಇನ್ನಾವ ಗತಿ ಹೊಂದುವೆನೆಂದು ನಿಮ್ಮ ಶ್ರೀಚರಣಕಮಲದಲಿ ಶಿರಬಾಗಿ, ಕರಕಮಲಮಂ ಜೋಡಿಸಿ, ಸ್ತೋತ್ರದಿಂ ನೇತ್ರಾಭಿಧಾನಂಗಳು ಪಾತ್ರ ಪವಾಡವಾಗಲೆಂದು ಸತ್ಪರ್ಥಮಾರ್ಗದಲ್ಲಿ ಗುರುಪಥವಾಗಲು, ಗುರುವಿಗಿಂದಧಿಕ ಪರದೈವವೆನಗಿಲ್ಲವೆಂದು ಪರಮ ಶ್ರೀಗುರುವೆ ನಮೋ ನಮೋ ಎಂದು ನಮಸ್ಕರಿಸುತ್ತಿದ್ದೆನಯ್ಯ ಅಪ್ಪಯ್ಯಾ, ಗುರುರಾಯ ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.