Index   ವಚನ - 34    Search  
 
ಅಪ್ಪಯ್ಯ ಗುರುರಾಯ ಕೇಳು: ಏನು ಹಾಡಿದರೇನು ಏನು ಓದಿದರೇನು, ನಿಮ್ಮನುಭಾವವನರಿಯದನ್ನಕ್ಕರ ಎನ್ನಗಿನ್ನಾವ ಪರಿಯಲಿ ಜ್ಞಾನ ಸಮ್ಮಿಶ್ರವಾಗುವುದಯ್ಯಾ? ಅಜ್ಞಾನ ಪರಿತಾಪಮಂ ಭೋದಿಸುವುದಲ್ಲದೆ, ಈ ನ್ಯಾಯ ಇನ್ನಾರಿಗೆ ಹೇಳುವೆನಯ್ಯಾ? ಅಯ್ಯಾ ನಾನೊಂದು ಸ್ತೋತ್ರವ ಮಾಡಲು, ಅಜ್ಞಾನವನೆಲ್ಲ ತಾನೊಂದು ನ್ಯಾಯವ ಮಾಡುವುದಲ್ಲದೆ, ನಾನತ್ತಲೆಳೆದರೆ ತಾನಿತ್ತಲೆಳೆವುದು. ಬೀಳಭೂಮಿ ಹಸನಾಗಲೊಲ್ಲದೆ, ಜಾಣ ಬಿತ್ತಿಗೆಯ ಬಿತ್ತಿದರೆ ಬೆಳೆಯುವುದೆಂತಯ್ಯಾ? ಸುಳಿಗಾಳಿ ಬಡಿದು ಕೆಟ್ಟುಹೋಗುವುದಲ್ಲದೆ, ಈ ಮೂಳಹೀನನ ಮನಸಿಗೆ ನಾನು ಬೆಳೆದುಂಡೆನೆಂಬುವಂಥದು ಜ್ಞಾನವಿಲ್ಲದೆ ಹೋಯಿತು. ಕೂನವಿಲ್ಲದೆ ಅನುಭವಿಸುವಂಥ ಮಾನಕ್ಕೆ ಕೊರತೆಯಾಗಿ, ಜ್ಞಾನಬಾಹ್ಯನಾಗಿ ಸ್ನೇಹದುರ್ಲಭದಿಂದ ಕಾಡುವ ಮಾಯಾ ಪ್ರಪಂಚದ ಸವಿಗಾರನು ಕಾಯಕರ್ಮವೆಂಬ ಹೊಲಗೇರಿಯಲ್ಲಿ ಕುಳಿತು ಅನ್ಯಾಯವ ನುಡಿಯುತಿರ್ಪನಲ್ಲದೆ, ತನ್ನತಾ ಸಾಕ್ಷೀಭೂತನಾಗಿ, ಭಿನ್ನ ಭಾವಾರ್ಥಮಂ ಮರೆದು ಸುಮ್ಮಗಿರಲೊಲ್ಲದೆ ಹಮ್ಮು ಅಹಂಕಾರದಿಂದುರಿದು, ದಮ್ಮಿನ ಮಾತುಗಳನಾಡಿ ಸಮಯವ ಸಾಧಿಸಿಕೊಳ್ಳದ ಅಗಮ್ಯದಿಂದ ಹೊಟ್ಟೆಹೊರಕೊಂಬುವನ ಪ್ರತಾಪಮಂ ಏನೆಂದು ಹೇಳಲಿ, ಯಾವುದಂತಾಡಲಿ. ಅಯ್ಯಾ ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.