Index   ವಚನ - 35    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ. ಬಿಚ್ಚಿದರೆ ಹುರುಳಿಲ್ಲವಯ್ಯಾ. ನೀ ಮೆಚ್ಚಿದೆಯಾದರೆ ಮುಚ್ಚಿಕೊಂಡಿರುವುದಲ್ಲದೆ ಹುಚ್ಚು ಮತ್ಸರವಾಗುವುದೆಂತು? ನಿಮ್ಮಿಚ್ಛಾಮಾತ್ರದಿಂದ ಅಚ್ಚಪ್ರಸಾದಿಗಳಾದ ಶಿವಶರಣರು ಎನ್ನ ಅಚ್ಚುಗವನು ವಾಚ್ಯಸಂಭ್ರಮವೆಂದು ಮೆಚ್ಚುಗಾರರು ಬಚ್ಚಿಟ್ಟುಕೊಂಡು ಎಚ್ಚರದಲ್ಲಿ ಕೂಗುತ್ತಿರ್ಪರಲ್ಲದೆ, ಅಯ್ಯಾ ಶಿವಸಮರ್ಪಣವಾಗಲೆಂದು ಅವಿರಳಜ್ಞಾನಾನಂದದಲ್ಲಿ ಭವಿಗಳ ಸಹವಾಸ ಮರೆದು, ವಿವೇಕತ್ವದಿಂದ ಆ ಮಹಾತ್ಮರು ಎನ್ನನು ಬಹುಮಾನಗಾರನೆಂದು ಹೆಸರಿಟ್ಟು ಕರೆಯಲು, ನಾನವರೊಳಗಾಡಿ ಅನುಸ್ಮರಣೆಯನು ಮಾಡಲು, ನೀನಾವ ದೇಶದ ಸುದ್ದಿ ಹೇಳಲು, ಮುಗ್ಧ ರುಚಿಗೊಂಡು ಜ್ಞಾನಪ್ರಕಾಶವಾಗಲು, ಅಬದ್ಧಜೀವಿಗಳಿಗೆ ಅಸಾಧ್ಯವಾಗಿ, ಕದ್ದ ಕಳ್ಳನ ಹೆಡಗುಡಿಯಂ ಕಟ್ಟಿ, ಮುದ್ದಿ ಲಂಚಮಂ ಕೊಟ್ಟು, ಸುದ್ದಿ ಸುಳಿವಿಲ್ಲದೆ ಸಿದ್ಧಪ್ರಸಿದ್ಧನಾಗಿ ಗುರುರೇವಣಸಿದ್ಧೇಶನಹುದೆಂದೆನಿಸಿ, ಲದ್ದಿ ಸೋಮಾರಾಧ್ಯರಿಗೆ ಸ್ವಬುದ್ಧಿಯನು ಕೊಟ್ಟು, ಸಭಾಮಧ್ಯದಲ್ಲಿಟ್ಟುಕೊಂಡು ಗುದ್ದಿ ಗುದ್ದಿ ಮುದ್ದಾಡುವಂಥದು ನ್ಯಾಯ ನಿನಗಲ್ಲವೆ, ಎಲೆ ಲಿಂಗವೆ ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.