Index   ವಚನ - 36    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ಎನ್ನ ಪ್ರತಾಪಮಂ ಏನು ಹೇಳಲಿ, ಈ ಪರಿತಾಪ ನರರಿಗೆ ಬೇಸರವಾಗಿಹುದೆಂದು. ಗುರುವೆ ಕೇಳಯ್ಯ, ಬಡತನವಾಗಿ ತಿರಿದುಂಡರೆ, ಬದುಕ ಮಾಡದ ಭಂಡನೆಂಬರು, ಹಿಡಿದು ಬಡಿದು ಗುದ್ದುವರು. ನಡೆನುಡಿಯಿಂದ ಅನುಭಾವದಿಂದ ದುಡಿದುಡಿದು ಧನಪ್ರಾಪ್ತಿಯಾಗಲು ನೆರೆಹೊರೆ ಪದಾರ್ಥ ಕೈಸೇರಿತೆಂಬರು. ಈ ಮೂಢಾತ್ಮರು ಬೆಡಗು ನಿಶ್ಚೈಸಿ, ಮಡದಿ ಮಕ್ಕಳು ಸೌಖ್ಯದಿಂದಿರಲು, ಕೊರಳುಗೊಯ್ಕ ಹುಡುಗನೆಂಬರು. ಕೋಡುಗಲ್ಲಿನ ಮೇಲೆ ಕುಳಿತು ದೃಢವಿಡಿದುಂಡರೆ, ಮದುಮಕ್ಕಳೆಂದರಿಯದೆ, ಬಹುಮುಡದಾರನೆಂಬರು. ಬಡಿವಾರಮಂ ತೊರೆದು, ಮೃಡ ನಿಮ್ಮ ಧ್ಯಾನಿಸೆ, ಅಡವಿಗೊಲ್ಲನೆಂದಾಡಿಕೊಂಬರು. ಈ ಕಡುಪಾಪಿಷ್ಠರು ಬುಡಕಡೆಯಿಲ್ಲದ ವಸ್ತುವ ನೆಲೆಗೊಂಡು ನಿಲುಕಡೆಯಿಂದಾಡೆ, ಸುಳ್ಳು ಬಡಾಯಿ ಮಾತು ಅದ್ವೈತ ದಾರಿದ್ರ್ಯನೆಂಬರು. ಗುರುವೆ ಕೇಳಯ್ಯ, ನಾ ನಿಮ್ಮನು ಪಡೆದನುಭವಿಸುವಂಥ ಪ್ರಾರಬ್ಧವನು ಇನ್ನಾರಿಗೆ ಹೇಳಲಿ, ಕೇಳಲಿ, ನೀ ಬೇರಲ್ಲವೆ, ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.