Index   ವಚನ - 37    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ ಕೇಳು: ಜಂಗಮ ಜಗಭರಿತನೆಂದು ಮಂಗಲಸ್ವರೂಪನಾದ ಆದಿಬಸವೇಶ್ವರನು ಅನಾದಿ ಸಂಗಮೇಶ್ವರನೊಳಗಾಗಿ ಕೂಗುತಿರ್ಪನಲ್ಲದೆ, ಈ ಭಂಗೇಡಿಗಳಾದ ಮಂಗಮನುಜರಿಗೆ ಎಚ್ಚರವಿಲ್ಲದೆ ಹೋಯಿತು. ತಮ್ಮಂಗದ ಮೇಲೆ ಲಿಂಗವಿರುತಿರಲು, ಪ್ರಾಣಲಿಂಗದ ಹೊಲಬನರಿಯದೆ ಜಂಗಮನಿಂದೆಯ ಮಾಡುತಿರ್ಪರಯ್ಯಾ, ಲಿಂಗವಂತರೆಂದು ಹೇಳಿಕೊಂಬುತಿಪ್ಪರಯ್ಯಾ. ಅಯ್ಯಾ ಗುರುರೂಪವಾದುದ, ಲಿಂಗಪ್ರತಾಪವಾದುದ, ಜಂಗಮನಿರೂಪವಾದುದ ಅನಂಗಸಂಗಿ ಸಂಗನಬಸವೇಶ್ವರನು ಬಲ್ಲನಯ್ಯಾ, ಅರಿದಿಪ್ಪನಯ್ಯಾ. ಈ ಅಂಗವಿಕಾರಗೇಡಿಗಳ ಲಿಂಗಭಕ್ತರೆಂದು ಅಜ್ಞಾನ ಜಂಗಮವ ನಂಬಲು, ಪಂಗಳನ ಕೈಯ ಅಂಧಕನು ಹಿಡಕೊಂಡು ಹಾಳುಗುಂಡಿಯ ಬಿದ್ದಂತಲ್ಲವೆ. ಹಿಂಗಾರಿ ಮುಂಗಾರಿ ಬೆಳೆಯುವುದೆಂತಯ್ಯಾ. ನಿಮ್ಮಂಗದೊಡಲದುರಿ ತಾಪಮಂ, ವೀರಮಾಹೇಶ್ವರನೆಂಬ ವೀರಘಂಟೆ ಮಡಿವಾಳಪ್ಪಯ್ಯನು ಕಾರಣಾಂಗದಲ್ಲಿ ಕಠೋರ ವಾಕ್ಯವನು, ಜಂಗಮವು ಜಗದಾರಾಧ್ಯನೆಂದು ಮೇಂಗುಡಿ ಎತ್ತಿರ್ಪನಲ್ಲದೆ ಈ ಜಂಗುಳಿದೈವ ನೀಚಾತ್ಮರಿಗೆ ಸಂಗಸಮರಸಭಾವ ಅರಿಯದೆ ಹೋಯಿತ್ತಯ್ಯಾ. ಅಪ್ಪಯ್ಯಾ ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.