Index   ವಚನ - 20    Search  
 
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ್ದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ? ಬಿಡು ಬಡವೊಡೆಯನ, ಬಿಡದಿದ್ದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ್ದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ.