ವಚನ - 1588     
 
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು. ಗಮನವಿಲ್ಲದ ಪಿಕಶಿಶು ನುಡಿಯಲರಿಯದು. ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕುಟ. ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ! ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ? ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ? ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು. ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ, ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ. ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ. ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ ಎನಗೆ ತೋರದಿರಾ ಗುಹೇಶ್ವರ.