Index   ವಚನ - 1590    Search  
 
ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ. ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ? ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು. ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ. ಅದಕ್ಕೆ ಏನಾಯಿತ್ತು? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು. ಉಂಡರೆ ಹಂಗಿಗನೆ ಶಿವಯೋಗಿ? ಅನುವರಿದುಣಬಲ್ಲಡೆ ಎನ್ನವನೆಂಬೆನು. ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ. ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ ಹರಿಯವನಲ್ಲದೆ ನಮ್ಮವನಲ್ಲ. ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ ರುದ್ರನವನಲ್ಲದೆ ನಮ್ಮವನಲ್ಲ. ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ ಗುಹೇಶ್ವರಾ!