ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು.
ಕಾಯ ಅರಿವಿಂಗೆ ಹೊರಗೆ.
ಕಾಯ ಜೀವವೆರಡೂ ಕೂಡಿ ಕಂಡ ಜ್ಞಾನರತ್ನದ ರತಿ ಬೇರೆ.
ಆ ಘಟವ ಬೇರೆ ಭಿನ್ನವ ಮಾಡಿ,
ರತ್ನ ಮಾರುವ ಪರಿ ಇನ್ನೆಂತೊ?
ಇಷ್ಟದ ರೂಪ ಹಾಕಿ, ಮತ್ತೆ ಲಿಂಗಪೂಜಕನೆಂತಪ್ಪನೊ?
ಅಂಗದ ಕೂಟ, ಮನದ ವಿಶ್ರಾಂತಿ
ಉಭಯವ ಬೇರೆ ಮಾಡದಿರಯ್ಯಾ.
ಪತಿ ಹೋಹಲ್ಲಿ ಸತಿ ಉಳಿದಡೆ,
ಅದು ಅಪಮಾನದ ಕೇಡೆಂಬರು.
ನಿನ್ನಯ ನೆನಹ ಹೊತ್ತಿದ್ದ ಘಟ ಮಣ್ಣಿಗೀಡಾಗಲೇಕೆ?
ಚೆನ್ನಬಂಕೇಶ್ವರಲಿಂಗಾ,
ನಿನ್ನಲ್ಲಿಯೆ ಗ್ರಹಿಸಿಕೊಳ್ಳಯ್ಯಾ, ನಿನ್ನ ಧರ್ಮ.