Index   ವಚನ - 18    Search  
 
ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ. ಆ ಗಿರಿಯ ತಪ್ಪಲಲ್ಲಿ ಸಪ್ತಶರಧಿಗಳಿಪ್ಪವು. ಆ ಶರಧಿಯ ನಡುವೆ, ತರು ಮರ ಗಿರಿ ಗಹ್ವರ ಖಗ ಮೃಗಂಗಳಿಪ್ಪವು. ಈ ಭಾರವ ತಾಳಲಾರದೆ, ಅರಗಿನ ಮರದಡಿಯಲಿರ್ದ ಪರಮಜ್ಞಾನವೆಂಬ ಉರಿಯೆದ್ದು, ಅರಗಿನ ಮರ ಕರಗಿ ಕುಸಿಯಿತ್ತು, ಗಿರಿ ನೆಲಕ್ಕೆ ಬಿದ್ದಿತ್ತು, ಸಪ್ತಶರಧಿಗಳು ಬತ್ತಿದವು. ಅಲ್ಲಿರ್ದ ತರು ಮರ ಖಗ ಮೃಗಾದಿಗಳು ಗಿರಿಗಹ್ವರವೆಲ್ಲ ದಹನವಾದವು. ಇದ ಕಂಡು, ನಾ ನಿಮ್ಮೊಳು ಬೆರಗಾಗಿ ನೋಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.