ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ,
ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ.
ಮುಂದೆ ಬರೆಬರೆ ಮಹಾಸರೋವರವ ಕಂಡೆ.
ಸರೋವರದೊಳಗೊಂದು ಹಿರಿಯ ಮೃಗವ ಕಂಡೆ.
ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ,
ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ,
ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ.
ಇದ ಕಂಡು ನಾ ಹೆದರಿ, ಹವ್ವನೆ ಹಾರಿ,
ಬೆದರಿ ಬಿದ್ದೆನಯ್ಯಾ.
ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ,
ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ,
ಇವೆಲ್ಲವು ಸುಟ್ಟು ಬಟ್ಟಬಯಲಾದವು.
ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ,
ಮುಂದೆ ಇಟ್ಟಡಿಯ ಬಾಗಿಲೊಳಗೆ
ಮತ್ತೊಂದು ಮೃಗವ ಕಂಡೆ.
ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ,
ಕಣ್ಣುಂಟು ಬಾಯಿಲ್ಲ,
ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ,
ಪ್ರಾಣವುಂಟು ಒಡಲಿಲ್ಲ.
ಇದ ಕಂಡು ನಾ ಅಪ್ಪಿಕೊಳಹೋದಡೆ,
ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು.
ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ayyā ārū illada araṇyadalli,
nānaḍiyiṭṭu naḍavuttirdenayyā.
Munde barebare mahāsarōvarava kaṇḍe.
Sarōvaradoḷagondu hiriya mr̥gava kaṇḍe.
Ā mr̥gakke kombuṇṭu taleyilla,
bāyuṇṭu kaṇṇilla, kaiyuṇṭu hastavilla,
kāluṇṭu hejjeyilla, oḍaluṇṭu prāṇavilla.
Ida kaṇḍu nā hedari, havvane hāri,
bedari biddenayyā.
Āgenna hettatāyi bandu etti kuḷḷirisi,
cittamūlāgniya otti uruhidare,
ivellavu suṭṭu baṭṭabayalādavu.
Ā baṭṭabayaloḷage aḍiyiṭṭu naḍevāga,
Munde iṭṭaḍiya bāgiloḷage
mattondu mr̥gava kaṇḍe.
Ā mr̥gakke taleyuṇṭu kombilla,
kaṇṇuṇṭu bāyilla,
hastavuṇṭu kaiyilla, hejjeyuṇṭu kālilla,
prāṇavuṇṭu oḍalilla.
Ida kaṇḍu nā appikoḷahōdaḍe,
muṭṭada munnave ennane nuṅgittu.
Nuṅgida mr̥ga mahāliṅgadalliye aḍagittu,
basavapriya kūḍalacennabasavaṇṇā.