Index   ವಚನ - 25    Search  
 
ಅಯ್ಯಾ, ಎನ್ನ ಬಾಳುವೆಯಲ್ಲಿ ಹೇಳದೆ ಕೇಳದೆ, ಒಬ್ಬ ಕಾಳರಕ್ಕಸಿ ನುಂಗಿದಳಯ್ಯ. ಆ ಬಾಳುವೆಗೋಸುಗ ಕಾಳರಕ್ಕಸಿಯ ಬಾಯೊಳಗೆ ಸಿಲ್ಕಿದೆನಯ್ಯಾ. ಆ ಕಾಳರಕ್ಕಸಿ ಆವಾಗ ಅಗಿದಾಳೆಂದರಿಯೆ, ಆವಾಗ ಉಗಿದಾಳೆಂದರಿಯೆ. ಆ ಕಾಳರಕ್ಕಸಿಯ ಬಾಯಿಂದವೆ ಹೊರಟು ಆ ಬಾಳುವೆಯನಲ್ಲಿಯೆ ಬಿಟ್ಟು, ಆ ಕಾಳರಕ್ಕಸಿಯ ಬಾಯಿಂದಲೆ ಹೊರವಂಟು ಆ ಮಹಾಜಾಣನಾಳುವ ಪುರವ ಹೊಕ್ಕೆ. ಆ ಜಾಣನಾಳುವ ಪುರದೊಳಗೆ, ಕಾಣಬಾರದುದನೆ ಕಂಡೆ, ಕೇಳಬಾರದುದುನೆ ಕೇಳಿದೆ. ಕದಳಿಯನೆ ದಾಂಟಿದೆ, ಜ್ಞಾನಜ್ಯೋತಿಯ ಕಂಡೆ. ತಾನು ತಾನಾಗಿಪ್ಪ ಮಹಾಬೆಳಗಿನೊಳು ನಾನು ಓಲಾಡುತ್ತಿಪ್ಪೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ,