ಆಚಾರದ ಅರಿವು ಹೊರಗಾದ ಮೇಲೆ.
ಅಂಗದ ಮೇಲೆ ಲಿಂಗವಿದ್ದು ಫಲವೇನು?
ಕುರುಡನ ಕೈಯ ಕನ್ನಡಿ ಇದ್ದ ಹಾಗೆ,
ಬರಡಾವಿಗೆ ಶಿಶು ಹುಟ್ಟಿದ ಹಾಗೆ,
ಕುರುಡಗೆ ಕಣ್ಣೆಬೇನೆ ಬಂದ ಹಾಗೆ,
ಕುರುಡಿಗೆ ಮಕ್ಕಳಾದ ಹಾಗೆ,
ದೀನನ ಮನೆಯಲ್ಲಿ ಹೊನ್ನಿದ ಹಾಗೆ.
ಇವರೇನ ಮಾಡಿದರೇನು?
ತಮ್ಮ ಹಾನಿವೃದ್ಧಿಯನರಿಯದನ್ನಕ್ಕ,
ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ,
ಅಗಿದಗಿದು ತಿನಿಸಿಕೊಳುತಿಪ್ಪರಲ್ಲ,
ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.