Index   ವಚನ - 45    Search  
 
ಆಚಾರದರಿವು ಆಗಮವ ಕೂಡಿಕೊಂಡಿಹುದು. ವಿಚಾರದರಿವು ಶಾಸ್ತ್ರವ ಕೂಡಿಕೊಂಡಿಹುದು. ಲಿಂಗಾಚಾರದರಿವು ಅಂಗಭೋಗವ ಕೂಡಿಕೊಂಡಿಹುದು. ಆದಿ ವಿಚಾರದರಿವು ಜ್ಞಾನವ ಕೂಡಿಕೊಂಡಿಹುದು. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಶರಣರ ಪರಿ ಬೇರೆ. ಅದೆಂತೆಂದರೆ; ಗುರು ಕರದಲ್ಲಿ ಹುಟ್ಟಿದರು, ಲಿಂಗದಲ್ಲಿ ಬೆಳೆದರು. ಜಂಗಮದ ಸಂಗವ ಮಾಡಿದರು, ಪ್ರಸಾದದಲ್ಲಿ ಅಡಗಿದರು. ಇದೀಗ ನಮ್ಮ ಶರಣರ ನಡೆನುಡಿ ಅರಿವು ಆಚಾರ ಲಿಂಗೈಕ್ಯ. ಈ ಚತುರ್ವಿಧವು ಹೊರತಾಗಿ, ಅವರೊಬ್ಬರು ಸಾಧಿಸಿ ಎಂದರೆ, ಸಾಧಕರಿಗೆ ಸಾಧ್ಯವಲ್ಲ, ಭೇದಕರಿಗೆ ಭೇದ್ಯವಲ್ಲ. ಅರಿವಿಂಗೆ ಅಪ್ರಮಾಣು, ವಾಙ್ಮನಕ್ಕಗೋಚರ. ಆಗಮ ಶಾಸ್ತ್ರಂಗಳು ಅರಸಿ ಕಾಣವು. ಇದು ಕಾರಣವಾಗಿ, ಎಮ್ಮ ಶರಣರು ಗುರು, ಲಿಂಗ, ಜಂಗಮ, ಪ್ರಸಾದ ಈ ಚತುರ್ವಿಧವಿಡಿದು ಅಚಲಪದವನೆಯ್ದಿದರು. ಇದಕ್ಕೆ ನೀವೆ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣ.