Index   ವಚನ - 63    Search  
 
ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ ನಿಲವೆಂತಿಪ್ಪುದೆಂದರೆ, ಉರಿಯುಂಡ ಕರ್ಪುರದಂತೆ, ಶರಧಿಯ ಬೆರೆದ ಸಾರದಂತೆ, ನೀರೊಳಗೆ ಬಿದ್ದ ಆಲಿಯಂತೆ, ಉರಿಯ ಗಿರಿಯನೆಚ್ಚ ಅರಗಿನ ಬಾಣದಂತೆ, ಪರಿಮಳವನುಂಡ ಹರಿಯಂತೆ. ಇದರ ವಿವರವನರಿದರೆ, ಪರವ ಬಲ್ಲವ, ತನ್ನ ಬಲ್ಲವ, ಎಲ್ಲವು ತನ್ಮಯನಾಗಿರುವ. ಇಂತಪ್ಪ ಅಣುವಿಂಗಣುವಾಗಿ ನಿಂದ ಮಹಾಪ್ರಸಾದವ ನಾನೆತ್ತ ಬಲ್ಲೆನಯ್ಯಾ? ಇದ ಬಲ್ಲ ಪ್ರಸಾದಿಗಳ ಸೊಲ್ಲಿನೊಳಗೆ ನಾನಡಗಿದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.