ವಚನ - 4     
 
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.