Index   ವಚನ - 126    Search  
 
ತನುವ ಕೊಟ್ಟು ಭಕ್ತರಾದೆವೆಂಬರು, ಮನವ ಕೊಟ್ಟು ಭಕ್ತರಾದೆವೆಂಬರು, ಧನವ ಕೊಟ್ಟು ಭಕ್ತರಾದೆವೆಂಬರು. ತನು, ಮನ, ಧನವನೆಂತು ಕೊಟ್ಟಿರಿ ಹೇಳಿರಣ್ಣಾ? ನಿಮ್ಮ ಒಡವೆ ನಿಮ್ಮಲ್ಲಿ ಇದೆ. ಅದು ಹೇಗೆಂದರೆ, ಬಲ್ಲವರು ನೀವು ಕೇಳಿ, ತನುವ ನೀವು ಕೊಟ್ಟರೆ ನೀವು ರೂಪಾಗಿ ಇರುವದಕ್ಕೇನು? ಮನವ ನೀವು ಕೊಟ್ಟರೆ ನೀವು ನಿಮಗೆ ನಡೆನುಡಿ ಚೈತನ್ಯವೇನು? ಧನವ ನೀವು ಕೊಟ್ಟರೆ ಕ್ಷುತ್ತಿಂಗೆ ಭಿಕ್ಷ, ಸೀತಕ್ಕೆ ರಗಟೆ ಏನು? ಅಂತಲ್ಲ, ಕೇಳಿರಣ್ಣಾ! ತನುವ ಕೊಟ್ಟುದಾವುದೆಂದರೆ, ಹುಸಿಮನವ ಕೊಟ್ಟುದಾವುದೆಂದರೆ, ವ್ಯಾಕುಳವನೆಲ್ಲ ಅಳಿದು ನಿರಾಕುಳವಾಗಿ ನಿಂದ ಮನವೆ ಲಿಂಗವಾಯಿತ್ತು ಧನವ ಕೊಟ್ಟಿಹೆನೆಂಬುದಾವುದೆಂದರೆ, ಇಂದಿಗೆ ನಾಳಿಗೆ ಎಂಬ ಸಂದೇಹದ ಭಾವಕ್ಕೆ, ಭಯಕ್ಕೆ ಭವವಳಿವುದುದೆ ಜಂಗಮವಾಯಿತ್ತು. ಇಂತಿದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಮಾಟಕೂಟ. ಇದನರಿಯದೆ ಏನೊಂದು ಮಾಡಿದರೂ ನೀಡಿದರೂ ಕೊಟ್ಟರೂ ಕೊಂಡರೆಯೂ, ವಾಯಕ್ಕೆ ವಾಯ ಬಸವಪ್ರಿಯ ಕೂಡಲಚೆನ್ನಬಸವಣ್ಣ.