ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು
ಬಲ್ಲತನಕ್ಕೆ ಗೆಲ್ಲಸೋಲಕ್ಕೆ ಹೋರಿ,
ಸಲ್ಲದೆ ಹೋದರು ನಮ್ಮ ಶರಣರಿಗೆ.
ಅದೇನು ಕಾರಣವೆಂದರೆ,
ಇವರೆಲ್ಲ ಪುರಾಣದ ಪುಂಡರು, ಶಾಸ್ತ್ರದ ಸಟೆಯರು,
ಆಗಮದ ತರ್ಕಿಗಳು, ವೇದದ ಹಾದರಿಗರು,
ಬೀದಿಯ ಪಸರದ, ಸಂತೆಯ ಸುದ್ದಿಯ ಗೊತ್ತಿಗರು.
ಇಂತಿವರಾರೂ ಲಿಂಗದ ನೆಲೆಯನರಿಯರು.
ಹಿಂದೆ ಹೋದ ಯುಗಂಗಳಲ್ಲಿ ಹರಿಬ್ರಹ್ಮರು ವಾದಿಸಿ,
ನಮ್ಮ ದೇವನ ಕಾಣದೆ ಹೋದರು. ಇದಕ್ಕೆ ಶ್ರುತಿ ಸಾರುತ್ತಿದೆ.
ದೇವ ದಾನವ ಮಾನವರು ಕಾಲ ಕಾಮಾದಿಗಳ ಆರಾಧಿಸಿ,
ನಮ್ಮ ದೇವರ ಕಾಣದೆ ಹೋದರು.
ನಿಮ್ಮ ಪಾಡೇನು? ಅರಿಮರುಳುಗಳಿರಾ?
ನಮ್ಮ ದೇವನ ಕಂಡೆನೆಂದರೆ ನೋಟಕಿಲ್ಲ, ನೆನಹಿಗಿಲ್ಲ.
ತನುವಿಗಿಲ್ಲ, ಸಾಧಕರಿಗಿಲ್ಲ, ಭಾವನೆಗಿಲ್ಲ.
ಇಂತಪ್ಪ ದೇವನ ಒಡಲ ಹಿಡಿವರ ಕಂಡೆನೆಂದರೆ ಆಗದು.
ಇದರ ಬಿಡುಮುಡಿಯನರಿದು ಅಂಗೈಸುವ ಶರಣರ ಸಂಗದೊಳಗೆ
ಎನ್ನ ಕಂಗಳು ಲಿಂಗವಾಗಿ, ಕರವೆ ಜಂಗಮವಾಗಿ,
ಇಹಪರದೊಳಗೆ ಪರಿಪೂರ್ಣವಾದೆನಯ್ಯಾ.
ನಿಮ್ಮ ಧರ್ಮ ನಿಮ್ಮ ಧರ್ಮ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.