Index   ವಚನ - 138    Search  
 
ನಂಬುವುದು, ಶರಣರನೆ ನಂಬುವುದು. ಕೊಂಬುವುದು, ಶರಣರ ಪ್ರಸಾದವನೆ ಕೊಂಬುವುದು. ಕೊಡುವುದು, ಶರಣರಿಗೆ ಕೊಡುವುದು. ಉಡುವುದು, ಶರಣರುಟ್ಟ ಮೈಲಿಗೆಯನೆ ಉಡುವುದು. ಇಂತಪ್ಪ ಶರಣರ ಬರವೆ, ಎನ್ನ ಪ್ರಾಣದ ಬರವು. ಅವರ ಹೊಕ್ಕೆ ಎನ್ನ ಪ್ರಾಣದ ಹೊಕ್ಕು. ಇಂತಪ್ಪ ಶರಣರ ಸಂಗವ ಮಾಡಿದ ಕಾರಣ, ಏಕವಾಗಿ ಹೋದೆ ಅವರ ಪಾದದಲ್ಲಿ. ಇನ್ನು ಬೇಕು ಬೇಡೆಂಬ ಸಂದೇಹ ಹುಟ್ಟಿದರೆ, ಇಹಲೋಕಕ್ಕೂ ಅಲ್ಲ, ಪರಲೋಕಕ್ಕೂ ಅಲ್ಲ. ಇದಕ್ಕೆ ನೀವೇ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ