Index   ವಚನ - 198    Search  
 
ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ನಾಹಂ ಎಂದು ಅಹಂಕರಿಸಿ, ಅನಿತ್ಯದೇಹಿಗಳಾಗಿ, ಅನಾಮಿಕರಾಗಿಹೋದರು. ಶಾಸ್ತ್ರವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಶ್ರವಣ, ಸನ್ಯಾಸಿ, ಯೋಗಿ, ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು. ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಕ್ರಿಯಾಪಾದ, ಚರ್ಯಪಾದ, ಜ್ಞಾನಪಾದವೆಂದು ನಾನಾಪರಿಯ ಕರ್ಮಭಕ್ತಿಯ ಮಾಡಿ, ಲಿಂಗ ಜಂಗಮದ ಮರ್ಮವನರಿಯದೆ, ಅಧರ್ಮಿಗಳಾಗಿ ಹೋದರು. ಪುರಾಣವನೋದಿದವರೆಲ್ಲ ನಮ್ಮ ಪುರಾತರು ಹೋದ ಹಾದಿಯನರಿಯದೆ, ಪುರದ ಬೀದಿಯೊಳಗೆ ಮಾತು ಕಥೆಯ ಪಸಾರವನಿಕ್ಕಿ ಮಾಡಿ, ಫಲಪದ ಮುಕ್ತಿಗೆ ಸಲ್ಲದೆ ಹೋದರು. ಇದು ಕಾರಣ, ಈ ಚತುರ್ವಿಧದೊಳಗಾವಂಗವೂ ಅಲ್ಲ . ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಶರಣರ ಪರಿ ಬೇರೆ.