ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ,
ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ
ಕಾಷಾಯಾಂಬರವ ಧರಿಸಿ ಫಲವೇನು?
ಕಾಮ ಕೆಡದು, ಕ್ರೋಧ ಬಿಡದು,
ಲೋಭ ಹಿಂಗದು, ಮೋಹ ನಿಲ್ಲದು,
ಮದ ಹೆರೆಸಾರದು, ಮತ್ಸರ ಬೆಂದುಹೋಗದು.
ಇವೆಲ್ಲ ಸಹಿತ ಜಂಗಮಭಕ್ತರೆಂದು
ಸುಳಿವವರ ಕಂಡು ನಾಚಿತ್ತು ಎನ್ನ ಮನ.
ಭಕ್ತಜಂಗಮ ಘನವನೇನೆಂದು ಉಪಮಿಸುವೆ?
ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ,
ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ,
ಉರಿಯ ಹಾಗೆ, ಕರ್ಪುರದ ಹಾಗೆ,
ಆವಿಯ ಹಾಗೆ, ನೀರ ಹಾಗೆ,
ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ
ನಮೋ ನಮೋ ಎನುತಿರ್ದೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .