ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು
ಹೆಸರಿಟ್ಟುಕೊಂಡು ಚೆನ್ನಾಗಿ ನುಡಿವಿರಿ.
ಶುದ್ಧವಾದ ಮುಖ, ಸಿದ್ಧವಾದ ಮುಖ, ಪ್ರಸಿದ್ಧವಾದ ಮುಖ,
ಅರಿದರೆ ನೀವು ಹೇಳಿರೊ.
ಅರಿದು ಅರಿಯದೆ, ಅರಿಮರುಳುಗಳಿರಾ ನೀವು ಕೇಳಿರೊ.
ಕಾಯಕರಣಾದಿಗಳ ಗುಣವಳಿದುದೆ ಶುದ್ಧ .
ಜೀವನ ದೃಶ್ಯ ಕೆಟ್ಟು, ಜಗದ ವ್ಯಾಕುಳವಳಿದು,
ನಿರಾಕುಳದಲ್ಲಿ ನಿಂದುದೆ ಸಿದ್ಧ.
ಪ್ರಾಣದ ಭಯ ಮರಣದ ಭಯ ಮರಣಾದಿಗಳ ಹಿಂಗಿ,
ಭಾವಳಿದು ಭವಕ್ಕೆ ಸವೆದುದೆ ಪ್ರಸಿದ್ಧ .
ಈ ತೆರನನರಿಯದೆ ಎತ್ತರ ತೆತ್ತರನಾಗಿ ನುಡಿವಿರಿ.
ಬಲ್ಲವರೆನಿಸಿಕೊಂಡಿಹೆವೆಂದು ನಿಮ್ಮ ಬಲ್ಲತನ ಹಾಳಾಯಿತ್ತು .
ನೀವು ಬರುಸೂರೆಯ ಹೋಗುವುದನರಿಯದೆ,
ಬರಿದೆ ಏಕೆ ಅರಚಾಗಿ ಸತ್ತಿರಿ, ನೆರೆ ಮೂರು ಲೋಕವೆಲ್ಲ?
ಇದನರಿದಾದರೂ ಆರಿಗೂ ಕೊಡಬೇಡ, ಕೊಳಬೇಡ.
ಮನಮುಟ್ಟಿ ಎರಗಿ ಬದುಕಿರೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .