Index   ವಚನ - 227    Search  
 
ಹರಿವ ಜಲಧಿಯಂತೆ, ಚರಿಸಿಬಹ ಮನವ ನಿಲ್ಲೆಂದು ನಿಲಿಸುವ ಪುರುಷರುಂಟೆ? ಬಿರುಗಾಳಿ ಬೀಸಿದರೆ ಒಲಿ ಒಲಿದು ಉರಿವ ಬಲುಗಿಚ್ಚಿನ ಉರಿಯ ನೆಲೆಗೆ ನಿಲಿಸುವರುಂಟೆ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ? ಇವ ಬಲ್ಲೆನೆಂಬವರೆಲ್ಲ ಅನ್ನದ ಮದ, ಅಹಂಕಾರದ ಮದ, ಕುಲಮದ, ಛಲಮದ, ಯೌವನಮದ, ವಿದ್ಯಾಮದ, ತಪದ ಮದ, ಆತ್ಮದ ಮದ ಇಂತೀ ಅಷ್ಟಮದವಿಡಿದು ಬಲ್ಲೆವೆಂಬರಲ್ಲದೆ, ದೃಷ್ಟನಷ್ಟವಾವುದೆಂದರಿಯದೆ, ಎಲ್ಲರೂ ಭ್ರಷ್ಟರಾಗಿಹೋದರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ನಿಮ್ಮ ನೆಲೆಯನರಿಯದ ಕಾರಣ.