Index   ವಚನ - 248    Search  
 
ಹೊತ್ತುಹೊತ್ತಿಗೆ ನಿತ್ಯರ ಸಂಗವ ಮಾಡಿ, ಕರ್ತೃವೆಂಬುದನರಿದೆ, ನಾ ಭೃತ್ಯನೆಂಬುದನರಿದೆ. ಸತ್ಯವೆಂಬುದನರಿದು, ಸದಾಚಾರವಿಡಿದು, ತುದಿ ಮೊದಲು ಕಡೆ ನಡುವೆ, ಆದಿ ಅನಾದಿಗೆ ನಿಲುಕದ ಘನವೇದ್ಯ ಲಿಂಗವ ಕಂಡೆ. ಆ ಲಿಂಗವ ಸೋಂಕಲೊಡನೆ ಲಿಂಗದಂತಾದೆ. ಜಂಗಮವ ಮುಟ್ಟಿ ಪೂಜಿಸಲೊಡನೆ ಜಂಗಮದಂತಾದೆ. ಪ್ರಸಾದವ ಕೊಳ್ಳಲಾಗಿ, ಆ ಪ್ರಸಾದದಂತಾದೆ. ಇನ್ನು ಪರವಿಲ್ಲವೆಂದು ಪ್ರಸಾದದಲ್ಲಿಯೆ ತಲ್ಲೀಯವಾದೆ. ಇದ ಬಲ್ಲವರು ನೀವು ಕೇಳಿ. ಎನ್ನ ಹಮ್ಮು ಬಿಮ್ಮು ಉಂಟೆನಬೇಡ. ಇದಕ್ಕೆ ದೃಷ್ಟವ ಹೇಳಿಹೆ ಕೇಳಿರಣ್ಣಾ! ಕೀಡಿ ತುಂಬಿಯ ಸ್ನೇಹದ ಹಾಗೆ. ಶರಣನಾದರೆ ಜ್ಯೋತಿ ಜ್ಯೋತಿಯ ಮುಟ್ಟಿದ ಹಾಗೆ. ದರ್ಪಣ ದರ್ಪಣದೊಳಗೆ ಅಡಗಿದ ಹಾಗೆ. ಇದರೊಪ್ಪವ ಬಲ್ಲವರು ತಪ್ಪದೆ ಎನ್ನಂಗ, ಬಸವಪ್ರಿಯ ಕೂಡಲಚೆನ್ನಬಸವಣ್ಣ.