Index   ವಚನ - 63    Search  
 
ನಿಃಕಲ ಪರತತ್ವವ ಮಹಾಲಿಂಗಕ್ಷೇತ್ರ. ಆ ಕ್ಷೇತ್ರದಲ್ಲಿ ನಿಕ್ಷೇಪವಾಗಿ ನಿಧಾನಿಸಿದ್ದ ಘನಚೈತನ್ಯವೆ ಷಟ್‍ಸ್ಥಲಲಿಂಗ ಮೂಲಾಂಕುರವೆನಿಸುವ ಪರಮಕಳೆ. ಆ ಪರಮಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ, ಪರಮಾತ್ಮ ಪರಮಜ್ಞಾನ ಪರಮಚೈತನ್ಯ ನಿಃಕಲ ಚರವೆನಿಸುವ ಪರವಸ್ತು. ಶ್ರುತಿ: ವರ್ಣಾತೀತಂ ಮನೋsತೀತಂ ಭಾವಾತೀತಂ ಚ ತತ್ಪರಂ | ಜ್ಞಾನಾತೀತಂ ನಿರಂಜನ್ಯಂ ತತ್ಕಲಾ ಸೂಕ್ಷ್ಮಭಾವತಃ || ಇಂತೆಂದುದಾಗಿ, ಇಂತೀ ನಿರವಯ ಚರಲಿಂಗದ ಚೈತನ್ಯವೆಂಬ ಪ್ರಸನ್ನ ಪ್ರಸಾದಮಂ ಇಷ್ಟಲಿಂಗಕ್ಕೆ ಕಲಾಸಾನಿಧ್ಯವಂ ಮಾಡಿ, ಆ ಚರಲಿಂಗದ ಸಾಮರಸ್ಯ ಚರಣಾಂಬುವಿಂ ಮಜ್ಜನಕ್ಕೆರೆದು, ನಿಜಲಿಂಗೈಕ್ಯವನೆಯ್ದಲರಿಯದೆ ಕಂಡವರ ಕಂಡು, ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಡವರ ತೆರನಾದ ಭಂಡರ ಮೆಚ್ಚವನೆ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ?