Index   ವಚನ - 66    Search  
 
ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು, ಅಂಗಶುದ್ಧ ಸೌಕರ್ಯವಿಲ್ಲದವನ ಮುಖವ ನೋಡಲಾಗದು. ಅವನ ಮುಟ್ಟಲೆಂತೂ ಆಗದು. ಮನದ ಮಲಿನವ ಕಳೆದು ಪ್ರಾಣಲಿಂಗವ ಧರಿಸಬೇಕು. ತನುವಿನ ಮಲವ ಕಳೆದು ಇಷ್ಟಲಿಂಗವ ಧರಿಸಬೇಕು. ಜೀವತ್ರಯಂಗಳ ಮಲವ ಕಳೆದು ಪ್ರಸಾದವ ಧರಿಸಬೇಕು. ಮನದ ಮಲಿನವಾವುದೆಂದಡೆ ಮನವ್ಯಾಕುಲ. ತನುವಿನ ಮಲಿನವಾವುದೆಂದಡೆ ತನುಗುಣವ್ಯಾಪ್ತಿ ತನುತ್ರಯದ ಮಲಿನವಾವುದೆಂದಡೆ ಈಷಣತ್ರಯ. ಜೀವತ್ರಯದ ಮಲವಾವುದೆಂದಡೆ ಅವಸ್ಥಾತ್ರಯ. ಕರಣಂಗಳ ಮಲವಾವುದೆಂದಡೆ ಸಂಕಲ್ಪ ವಿಕಲ್ಪ. ಅಸತ್ಯ ನಿಂಧ್ಯ ಮಿಥ್ಯವಾದ ಸತ್ಕಿರಿಸುತಿಹ, ಅನ್ಯರಿಗೆ ಕೈಯನಾನುವ. `ನಿರ್ಮಲಸ್ಯ ತು ನಿರ್ಮಾಲ್ಯಂ ಮಲದೇಹೀ ನ ಧಾರಯೇತ್' ಎಂದುದಾಗಿ, ಲಿಂಗವಿಪ್ಪ ಸುಕ್ಷೇತ್ರ ಕಾಯದ ಮಲಿನವ ಕಳೆದು, ಪ್ರಸಾದವ ಧರಿಸದಿದ್ದಡೆ, ಭವಮಾಲೆ ಹಿಂಗದು, ನರಕ ತಪ್ಪದಯ್ಯಾ, ಮಹಾಲಿಂಗ ಕಲ್ಲೇಶ್ವರಾ.