Index   ವಚನ - 497    Search  
 
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ. ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ. ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದನುಭವಿಯಾದೆ. ಗುರುವಿನ ಕೃಪೆಯಿಂದ ಶುದ್ಧಸಿದ್ಧಪ್ರಸಿದ್ಧ ಪ್ರಮಾಣವನರಿದವನಾದೆ. ಎನಗೆ ಅಧಿಕವಪ್ಪ ವಸ್ತು ಎನಗೆ ಬೇರೊಂದೂ ಇಲ್ಲ. ಅದೇನು ಕಾರಣ? ಅವನಾದೆನಾಗಿ. ಗುರುವೆ ಎನ್ನ ತನುವಿಗೆ ಲಿಂಗದೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವದೀಕ್ಷೆಯ ಮಾಡಿ, ಎನ್ನ ತನುಮನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ, ಎನ್ನ ಸರ್ವಾಂಗವೂ ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣದಲ್ಲಿ ಲೋಕವ್ಯಾಪ್ತಿಯನರಿದೆ, ಲೋಕವೆನ್ನೊಳಗಾಯಿತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ನಾ ಹೊರಗಾದೆ ನಾ. ನೀ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶ ಮುಕ್ತಿ ಫಲಪ್ರದಾಯಕ ಗುರುವೇ ಬಸವಣ್ಣ ಕಪಿಲಸಿದ್ಧಮಲ್ಲಿಕಾರ್ಜುನಾ ನೀನಾಗಿ ಚೆನ್ನಬಸವಣ್ಣನಾಗಿ, ಪ್ರಭು ಮೊದಲಾದ ಅಸಂಖ್ಯಾತರೆಲ್ಲರನೂ ತೋರಿದೆ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ