ವಚನ - 709     
 
ನಿಷ್ಕಳಾತ್ಮನನು ಅರ್ಚಿಸೇನೆಂದೆಂಬೆ ಆ ನಿಷ್ಕಳವನರ್ಚಿಸುವ ಪರಿ ಹೇಂಗೊ? ಎಲೆ ಅಯ್ಯಾ: ನೀನು ಸಕಲದೊಳಗೆ ಇದ್ದು ನಿಷ್ಕಳವ ಭೇದಿಸಿ ಪೂರತನಾದೆನೆಂಬೆ. ನೀನೀ ಬೀಡಲಿರದಿದ್ದು ಒಬ್ಬಳ ಸಂಗವನೈವರು ಮಾಡುವಲ್ಲಿ ಕಾಬ ಪರಿಯ ಹೇಗೊ? ಗುರು ಕರಣವುಳ್ಳವಂಗಲ್ಲದೆ. ಅನಾಹತಲೋಕದಲ್ಲಿ ವಿಶ್ರಮಿಸುವಲ್ಲಿ, ಮೂಲ ತೊಡಗಿ ಸಾದಾಖ್ಯಪರಿಯಂತರ ಹೊಲಬುದಪ್ಪಿ ಬಪ್ಪಾಗ ಕಂಡವರಾರೊ ನಿನ್ನ ಪರಿಯ, ಗುರು ಕರುಣವುಳ್ಳವಂಗಲ್ಲದೆ. ಆಧಾರ ಮೂಲ ಮಧ್ಯ ಅಪರಸ್ಥಾನ ಹೃತ್ಸರೋಜದೊಳಿರ್ದ ಕನ್ನಿಕೆ ಬೆಳಗುಗೊಡನಂ ಹೊತ್ತು ಸೂಸಲೀಯದೆ ಮೂವತ್ತಾರು ಮನೆಯನು ನೋಡಿ ಸಾವಿರಂಗ ಪ್ರತಿಷ್ಠೆಯ ಮಾಡಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಇದ್ದೆಸೆಯನಿದ್ದೆಸೆಯಾದಳು.