ವಚನ - 1428     
 
ಯೋಗಭೂಷಣ, ನಿಮ್ಮ ಆದಿ ಅಕ್ಷರಭೇದ ಆದಿಯಾಧಾರಂಗಳಿಲ್ಲದಂದು, ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ, ತಾನೆನ್ನ ಕರುಣದಿಂ ನಿತ್ಯನೆನಿಸಿ; ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ ದಾಗಾದೆನೈ ಚೆನ್ನಬಸವ ತಂದೆ; ಯೋಗಮೂರುತಿಯೆ ನೀನೆನ್ನ ಗುರುವಾಗಿ ಶಿವಯೋಗಿಯಾನಾದೆನಯ್ಯಾ. ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ ನಾ ನಿಮ್ಮ ಕರುಣದಲ್ಲಿ ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ ಆಗಮಕ್ಕೊಳಗಾದ ಆಗಮಕೆ ಹೊರಗಾದ ಆನಂದಸ್ಥಾನದಲಿ ಸ್ವಯವಾದೆನೈ ದೇವ ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ ಕರುಣ ನಿಮಗಾಯಿತ್ತು, ಶ್ರೀಗುರು ಚೆನ್ನಬಸವಣ್ಣ ತಂದೆ.