Index   ವಚನ - 104    Search  
 
ಆದಿಯ ಪ್ರಸಾದವನರಿಯದೆ, ಅನಾದಿಯ ಪ್ರಸಾದಕ್ಕೆ ಹಸ್ತವ ನೀಡುವರಯ್ಯಾ, ಅನಾದಿಪ್ರಸಾದವನರಿಯದೆ, ಗಣಪ್ರಸಾದಕ್ಕೆ ಹಸ್ತವ ನೀಡುವರಯ್ಯಾ, ಗಣಪ್ರಸಾದವನರಿಯದೆ, ಸಮಯಪ್ರಸಾದಕ್ಕೆ ಹಸ್ತವ ನೀಡುವರಯ್ಯಾ. ಸಮಯ ಪ್ರಸಾದವನರಿಯದೆ, ಜಂಗಮಪ್ರಸಾದಕ್ಕೆ ಹಸ್ತವ ನೀಡುವರಯ್ಯಾ. ಜಂಗಮ ಪ್ರಸಾದಿಯಾದಾತನು ಆ ಜಂಗಮದ ಮುಖವ ನೋಡಿ, ಮನವು ತಲ್ಲೀಯವಾಗಿ ಕರಗದಿದ್ದರೆ ಆತ ಪ್ರಸಾದಿಯೆ? ಪರುಷವಿರಲು ಕಬ್ಬುನಕ್ಕೆ ಕೈಯ ನೀಡುವರೆ? ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯ ಪ್ರಸಾದವ ವೇದಿಸುತ್ತಿದ್ದೆನು.