Index   ವಚನ - 897    Search  
 
ಅಂಗವು ಲಿಂಗದಲ್ಲಿ ಸಂಬಂಧವಾದವರ ಲಿಂಗವೆಂದೇ ಕಾಂಬುದು, 'ಕೀಟೋsಪಿ ಭ್ರಮರಾಯತೇ' ಎಂಬ ನ್ಯಾಯದಂತೆ, ಅಂಗವು ಲಿಂಗ ಸೋಂಕಿ ಲಿಂಗವಾಯಿತ್ತಾಗಿ. ಲಿಂಗವೆಂದೇ ಕಾಂಬುದು. ಅಂಗೇಂದ್ರಿಯಂಗಳೆಂಬುವಿಲ್ಲ, ಅವೆಲ್ಲವೂ ಲಿಂಗೇಂದ್ರಿಯಂಗಳಾದ ಕಾರಣ, ಲಿಂಗವೆಂದೇ ಕಾಂಬುದು. "ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್ | ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ "|| ಎಂದುದಾಗಿ ಸರ್ವಾಂಗಲಿಂಗಿ ಕೂಡಲಚೆನ್ನಸಂಗಾ ನಿಮ್ಮ ಶರಣ.